ಪುತ್ತೂರು: ಆರೋಗ್ಯವೇ ನಿಜವಾದ ಸಂಪತ್ತು ಎಂಬುದನ್ನು ಅರಿತುಕೊಂಡು, ಪ್ರತಿಯೊಬ್ಬರೂ ತಮ್ಮ ತಮ್ಮ ಆರೋಗ್ಯದ ಬಗ್ಗೆ ನೈಜ ಕಾಳಜಿ ವಹಿಸಿದಾಗ ಆರೋಗ್ಯವಂತ ಸಮಾಜ ನಿರ್ಮಾಣ ಸಾಧ್ಯ ಎಂದು ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯೆ ರೊ.ಡಾ.ಸುಧಾ ಎಸ್.ರಾವ್ ಹೇಳಿದ್ದಾರೆ.
ರೋಟರಿ ಪುತ್ತೂರು ಯುವ, ರೋಟರಿ ಪುತ್ತೂರು ಸ್ವರ್ಣ ಹಾಗೂ ರೋಟರಿ ಪುತ್ತೂರು ಎಲೈಟ್ ಆಶ್ರಯದಲ್ಲಿ ಪುತ್ತೂರು ಸುದಾನ ಎಡ್ವರ್ಡ್ ಹಾಲ್‌ನಲ್ಲಿ ನಡೆದ ವಿಶ್ವ ಆರೋಗ್ಯ ದಿನಾಚರಣೆಯ ಕಾರಕ್ರಮದಲ್ಲಿ ಸಂಪನ್ಮೂಲವ್ಯಕ್ತಿಯಾಗಿ ಅವರು ಮಾತನಾಡಿದರು. ಆಯುರ್ವೇದ ಶಾಸ್ತ್ರವೇ ಆರೋಗ್ಯದ ಕಾಳಜಿಯನ್ನು ನಮಗೆ ತಿಳಿಸಿಕೊಟ್ಟಿದೆ, ಆದರೆ ನಾವು ಅದನ್ನು ಪಾಲಿಸುತ್ತಿಲ್ಲ ಎಂದ ಅವರು, ಪಂಚೇಂದ್ರಿಯಗಳ ಜೊತೆಗೆ, ಮನಸ್ಸನ್ನು ನಿಗ್ರಹಿಸುವ ಶಕ್ತಿಯನ್ನು ಬೆಳೆಸಿಕೊಳ್ಳಬೇಕೆಂದು ಕರೆ ನೀಡಿದರು. ಸಕ್ಕರೆ, ಎಣ್ಣೆ ಆರೋಗ್ಯದ ಮೇಲೆ ಬೀರುವ ಅಪಾಯಗಳನ್ನು ವಿವರಿಸಿದ ಅವರು, ನಿರಂತರ ವ್ಯಾಯಾಮದ ಜೊತೆಗೆ ಹಿತಕರ ಚಟುವಟಿಕೆಗಳನ್ನು ಮೈಗೂಡಿಸಿಕೊಳ್ಳುವಂತೆ ಸಲಹೆ ನೀಡಿದರು. ರೋಟರಿ ಪುತ್ತೂರು ಸ್ವರ್ಣದ ಅಧ್ಯಕ್ಷೆ ರೊ.ಸೆನೊರಿಟಾ ಆನಂದ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರತಿಯೊಬ್ಬರೂ ಆರೋಗ್ಯ ಕಾಯುವ ಸೂತ್ರಗಳನ್ನು ಪಾಲಿಸುವ ಮೂಲಕ ಆರೋಗ್ಯವಂತರಾಗುವಂತೆ ಕರೆ ನೀಡಿದರು.
ಕಾರ್ಯದರ್ಶಿಗಳಾದ ರೊ.ಉಮೇಶ್ ನಾಯಕ್ , ರೊ.ಆಶಾ ರೆಬೆಲ್ಲೋ, ನಿಯೋಜಿತ ಕಾರ್ಯದರ್ಶಿ ರಂಜಿತ್ ಮಥಾಯಸ್ ವಾರದ ಚಟುವಟಿಕೆಗಳ ವರದಿ ವಾಚಿಸಿದರು. ವಿದ್ಯಾರ್ಥಿ ಪ್ರಜ್ವಲ್, ಆ್ಯನೆಟ್ ಪ್ರಭಾವತಿ ಅದೃಷ್ಟ ವಿಜೇತರಾಗಿ ಆಯ್ಕೆಯಾದರು. ರೋಟರಿ ಪುತ್ತೂರು ಯುವದ ಕಾರ್ಯದರ್ಶಿ ಉಮೇಶ್ ನಾಯಕ್ ಅತಿಥಿಗಳನ್ನು ಪರಿಚಯಿಸಿದರು. ನಿಯೋಜಿತ ಅಧ್ಯಕ್ಷ ರೊ.ಭರತ್ ಪೈ ಸ್ವಾಗತಿಸಿದರು. ರೋಟರಿ ವಲಯ 5 ರ ಅಸಿಸ್ಟೆಂಟ್ ಗವರ್ನರ್ ರೊ.ರತ್ನಾಕರ ರೈ ಅತಿಥಿಗಳಿಗೆ ಸ್ಮರಣಿಕೆ ನೀಡಿದರು. ಆ್ಯನೆಟ್ ರಿಯಾರಾಮ್ ಆಶಯಗೀತೆ ಹಾಡಿದರು. ರೋಟರಿ ಎಲೈಟ್ ನ ನಿಯೋಜಿತ ಅಧ್ಯಕ್ಷ ರೊ.ಮನ್ಸೂರ್ ವಂದಿಸಿದರು. ಸದಸ್ಯರಾದ ರೊ.ಮೌನೇಶ ವಿಶ್ವಕರ್ಮ, ರೊ.ರಾಮ.ಕೆ. ಕಾರ್ಯಕ್ರಮ ನಿರ್ವಹಿಸಿದರು.