ಬಂಟ್ವಾಳ: ಇತ್ತೀಚೆಗೆ ನಿಧನ ಹೊಂದಿದ ಪುಂಜಾಲಕಟ್ಟೆ ಪ್ರಾ.ಆ.ಕೇಂದ್ರದ ನೇತ್ರ ಪರಿವೀಕ್ಷಕ ಶ್ರೀಧರನ್ ಕೆ.ವಿ. ಅವರಿಗೆ ಶ್ರೀ ಮುರುಘೇಂದ್ರ ಮಿತ್ರ ಮಂಡಳಿ, ಶ್ರೀ ಮುರುಘೇಂದ್ರ ವನಿತಾ ಸಮಾಜ ಮತ್ತು ಶ್ರೀ ಮುರುಘೇಂದ್ರ ಯಕ್ಷಗಾನ ಮಂಡಳಿ ವತಿಯಿಂದ ಶ್ರದ್ಧಾಂಜಲಿ, ನುಡಿನಮನ ಕಾರ್ಯಕ್ರಮ ಎ.೪ರಂದು ಶ್ರೀ ಮುರುಘೇಂದ್ರ ಮಿತ್ರ ಮಂಡಳಿ ಸಭಾಭವನದಲ್ಲಿ ನಡೆಯಿತು.
ಪುಂಜಾಲಕಟ್ಟೆ ಕರ್ನಾಟಕ ಪಬ್ಲಿಕ್ ಸ್ಕೂಲ್ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶ್ಯಾಂ ಪ್ರಸಾದ್ ಸಂಪಿಗೆತ್ತಾಯ ಅವರು ನುಡಿನಮನ ಸಲ್ಲಿಸಿ ಮಾತನಾಡಿ, ಶಾಲಾ ದಿನಗಳಲ್ಲಿ ಉತ್ತಮ ಕ್ರೀಡಾಪಟುವಾಗಿ, ನಾಯಕತ್ವ ಗುಣ ಹೊಂದಿ ಗುರುತಿಸಿಕೊಂಡಿದ್ದ ಶ್ರೀಧರನ್ ಅವರು ಉತ್ತಮ ಸಂಸ್ಕಾರವಂತರಾಗಿ ಸಾಮಾಜಿಕ, ಧಾರ್ಮಿಕ,ಆರೋಗ್ಯ, ಕಲೆ, ಕ್ರೀಡೆ ಹೀಗೆ ಎಲ್ಲ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದರು. ಅವರ ನಿಧನ ತುಂಬಲಾರದ ನಷ್ಟ ಎಂದು ಹೇಳಿದರು.
ಯಕ್ಷಗಾನ ಸಮಿತಿ ಸಂಚಾಲಕ ಪಿ.ಕಾಂತಪ್ಪ ಟೈಲರ್ ಅವರು ಮಾತನಾಡಿ,ಉತ್ತಮ ರಂಗಭೂಮಿ ಕಲಾವಿದರಾಗಿದ್ದ ಶ್ರೀಧರನ್ ಅವರು ಯಕ್ಷಗಾನದ ಅಭಿಮಾನಿಯಾಗಿದ್ದು, ಪೋಷಕರಾಗಿದ್ದರು. ಕಲೆಯ ಬಗ್ಗೆ ಅವರ ಕಾಳಜಿ ಅನುಕರಣೀಯ ಎಂದರು.
ಪಿಲಾತಬೆಟ್ಟು ವ್ಯ.ಸೇ.ಸ.ಸಂಘದ ನಿರ್ದೇಶಕ ಪ್ರಭಾಕರ ಪಿ.ಎಂ., ಪತ್ರಕರ್ತ ರತ್ನದೇವ್ ಪುಂಜಾಲಕಟ್ಟೆ , ಶ್ರೀ ಮುರುಘೇಂದ್ರ ಮಿತ್ರ ಮಂಡಳಿ ಮಾಜಿ ಅಧ್ಯಕ್ಷ ಜಯ ಪ್ರಕಾಶ್ ರಾವ್, ದಿನಕರ ಶೆಟ್ಟಿ ಅಂಕದಳ ಅವರು ನುಡಿನಮನ ಸಲ್ಲಿಸಿದರು. ಶ್ರೀ ಮುರುಘೇಂದ್ರ ವನಿತಾ ಸಮಾಜ ಅಧ್ಯಕ್ಷೆ ಆಶಾ ದಿನಕರ ಶೆಟ್ಟಿ , ಪಿಲಾತಬೆಟ್ಟು ಗ್ರಾ.ಪಂ. ಸದಸ್ಯೆ ಪುಷ್ಪಲತಾ ಮೋಹನ್ ಮತ್ತಿತರರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಇತ್ತೀಚೆಗೆ ನಿಧನ ಹೊಂದಿದ ಚಿತ್ರಕಲಾ ಅಧ್ಯಾಪಕ ದಿ.ಲಕ್ಷ್ಮಣ ಮಾಸ್ಟರ್ ಅವರ ಪತ್ನಿ ಪುಷ್ಪಾವತಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಮಿತ್ರ ಮಂಡಳಿ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.