ಬಂಟ್ವಾಳ: ತೀವ್ರವಾಗಿ ಹರಡುತ್ತಿರುವ ಕೊರೋನ ಮಹಾ ಮಾರಿ ವೈರಸ್ ನಿಯಂತ್ರಣಕ್ಕೆ ರಾಜ್ಯ ಸರಕಾರ ಹಲವು ಕಠಿಣ ನಿಯಮಗಳನ್ನು ಜಾರಿ ಮಾಡಿದ್ದು ಆ ಪೈಕಿ ನೈಟ್ ಕರ್ಫ್ಯೂ ಒಂದು. ಪ್ರತಿ ದಿನ ರಾತ್ರಿ 9ರಿಂದ ಬೆಳಗ್ಗೆ 6ರ ವರೆಗೆ ನೈಟ್ ಕರ್ಫ್ಯೂ ಜಾರಿಯಲ್ಲಿರುತ್ತದೆ. ಈ ನಿಯಮವನ್ನು ಉಲ್ಲಂಘಿಸಿ ಬುಧವಾರ ರಾತ್ರಿ ಅನಗತ್ಯವಾಗಿ ಸಂಚಾರಿಸುತ್ತಿದ್ದ ಹಲವು ವಾಹನಗಳ ಸವಾರರಿಗೆ ಬಂಟ್ವಾಳ ಪೊಲೀಸರು ದಂಡ ವಿಧಿಸಿದ್ದಾರೆ.
ನೈಟ್ ಕರ್ಫ್ಯೂ ಕಟ್ಟುನಿಟ್ಟಾಗಿ ಜಾರಿ ಮಾಡುವ ಉದ್ದೇಶದಿಂದ ಬುಧವಾರ ರಾತ್ರಿ ಬಂಟ್ವಾಳ ನಗರ ಠಾಣೆ ಮತ್ತು ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸರು ತಮ್ಮ ವ್ಯಾಪ್ತಿಯಲ್ಲಿ ತಪಾಸನಾ ಕಾರ್ಯದಲ್ಲಿ ತೊಡಗಿದ್ದರು. ರಾತ್ರಿ 9 ಗಂಟೆ ಆಗುತ್ತಿದ್ದಂತೆ ಅಂಗಡಿ ಮುಂಗಟ್ಟುಗಳ ಮಾಲಕರು ತಮ್ಮ ಅಂಗಡಿಗಳನ್ನು ಬಂದ್ ಮಾಡಿ ಸಹಕಾರ ನೀಡಿದ್ದಾರೆ. ಆದರೆ ರಾಷ್ಟಿçÃಯ ಹೆದ್ದಾರಿಯಲ್ಲಿ ವಾಹನಗಳ ಸಂಚಾರ ಇತ್ತು. ಪ್ರತೀ ವಾಹನಗಳನ್ನು ನಿಲ್ಲಿಸಿ ತಪಾಸನೆ ನಡೆಸಿರುವ ಪೊಲೀಸರು ಯಾವುದೇ ಸೂಕ್ತ ಕಾರಣಗಳು ಇಲ್ಲದೆ ಅನಗತ್ಯವಾಗಿ ಸಂಚಾರಿಸುತ್ತಿದ್ದ ಬೈಕ್, ಕಾರು ಸಹಿತ ಇತರ ವಾಹನಗಳ ಚಾಲಕರಿಗೆ ದಂಡ ವಿಧಿಸಿದ್ದಾರೆ.
ಮೇ 4ರ ವರೆಗೆ ನೈಟ್ ಕರ್ಫ್ಯೂ ಹಾಗೂ ವಾರದ ಪ್ರತಿ ಶನಿವಾರ ಮತ್ತು ಭಾನುವಾರ ಇಡೀ ದಿನ ಕರ್ಫ್ಯೂ ಜಾರಿಯಲ್ಲಿ ಇರಲಿದೆ. ಈ ಸಮಯದಲ್ಲಿ ಜನರು ಮನೆಯಿಂದ ಹೊರ ಬರಬಾರದು. ರಾತ್ರಿ 9 ಗಂಟೆಯ ಮೊದಲೇ ಮನೆಗೆ ಸೇರಬೇಕು. 9 ಗಂಟೆಯ ಬಳಿಕ ರಸ್ತೆಯಲ್ಲಿ ಸಂಚಾರಿಸುವುದು ಕಂಡರೆ ದಂಡ ವಿಧಿಸಲಾಗುವುದು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.