ಬಂಟ್ವಾಳ: ಕೊರೋನ ಸೋಂಕು ನಿಯಂತ್ರಿಸುವ ಹಿನ್ನೆಲೆಯಲ್ಲಿ ಸರಕಾರ ರೂಪಿಸಿರುವ ಎಲ್ಲಾ ನಿಯಮಗಳನ್ನು ಪಾಲಿಸಿಕೊಂಡು ಮದುವೆ ಕಾರ್ಯ ನಡೆಸಬೇಕು ಎಂದು ಬಂಟ್ವಾಳ ನಗರ ಮತ್ತು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಎಲ್ಲಾ ಮದುವೆ ಹಾಲ್ ಗಳ ಮಾಲಕರಿಗೆ ಪೊಲೀಸರು ಸೂಚನೆ ನೀಡಿದ್ದಾರೆ.
ಬಿ.ಸಿ.ರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ ಬಂಟ್ವಾಳ ನಗರ ಠಾಣೆಯ ಇನ್‌ಸ್ಪೆಕ್ಟರ್ ಚೆಲುವರಾಜ್, ಗ್ರಾಮಾಂತರ ಠಾಣೆಯ ಎಸ್ಸೆöÊ ಪ್ರಸನ್ನ, ಅಪರಾಧ ವಿಭಾಗದ ಎಸ್ಸೆöÊ ಸಂಜೀವ ನೇತೃತ್ವದಲ್ಲಿ ಮಂಗಳವಾರ ನಡೆದ ಮದುವೆ ಹಾಲ್‌ಗಳ ಮಾಲಕ ಸಭೆಯಲ್ಲಿ ಈ ಸೂಚನೆ ನೀಡಲಾಗಿದೆ.
ಹಾಲ್‌ನ ಒಳಗೆ ನಡೆಯುವ ಮದುವೆಗೆ 50 ಮಂದಿಗೆ ಹಾಗೂ ಹೊರಗೆ ನಡೆಯುವ ಮದುವೆಗೆ 50 ಮಂದಿಗೆ ಮಾತ್ರ ಪಾಲ್ಗೊಲ್ಲಬಹುದು. ಮದುವೆಯಲ್ಲಿ ಭಾಗವಹಿಸುವ ಪ್ರತೀಯೊಬ್ಬರು ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡುವುದು ಕಡ್ಡಾಯವಾಗಿದೆ. ಅಲ್ಲದೆ ಸರಕಾರ ರೂಪಿಸಿದ ಇತರ ಎಲ್ಲಾ ನಿಯಮಗಳನ್ನು ಪಾಲಿಸಬೇಕು. ನಿಯಮಗಳನ್ನು ಉಲ್ಲಂಘಿಸಿದರೆ ಹಾಲ್‌ನ ಮಾಲಕರಿಗೆ ದಂಡ ಹಾಗೂ ಕಾನೂನು ಪ್ರಕಾರ ಕ್ರಮ ಜರುಗಿಸಲಾಗುವುದು ಎಂದು ಸಭೆಯಲ್ಲಿ ಪೊಲೀಸರು ಖಡಕ್ ಎಚ್ಚರಿಕೆ ನಿಡಿದ್ದಾರೆ.
ಮದುವೆಗೆ ಸ್ಥಳೀಯ ಆಡಳಿತದಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ನಗರ ಠಾಣೆ ವ್ಯಾಪ್ತಿಯಲ್ಲಿ ನಡೆಯುವ ಮದುವೆಗೆ ಬಂಟ್ವಾಳ ಪುರಸಭೆಯ ಮುಖ್ಯಾಧಿಕಾರಿಯಿಂದ ಅನುಮತಿ ಪಡೆಯಬೇಕು. ಹಾಗೆಯೇ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ನಡೆಯುವ ಮದುವೆಗೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಿಂದ ಅನುಮತಿ ಪಡೆಯಬೇಕು. ಅನುಮತಿ ಪಡೆಯದ ಮದುವೆಗೆ ಹಾಲ್ ಮಾಲಕರು ಹಾಲ್ ನೀಡಬಾರದು ಎಂದು ಪೊಲೀಸರು ಸೂಚಿಸಿದ್ದಾರೆ.