ಮಂಗಳೂರು: ಕೊರೋನ ವೈರಸ್ ಹರಡುವುದನ್ನು ನಿಯಂತ್ರಿಸಲು ರಾಜ್ಯ ಸರಕಾರ ಮಂಗಳವಾರ ನಿಯಮಗಳನ್ನು ಜಾರಿ ಮಾಡಿ ಆದೇಶ ನೀಡಿದೆ. ರಾಜ್ಯ ಸರಕಾರದ ನಿಯಮಗಳಲ್ಲಿ ಮದುವೆ ಸಮಾರಂಭಕ್ಕೆ ಅನುಮತಿ ನೀಡಿದೆ. ಈ ನಡುವೆ ವಾರದ ಶನಿವಾರ ಮತ್ತು ಭಾನುವಾರ ಸಂಪೂರ್ಣ ಲಾಕ್‌ಡೌನ್ ಘೋಷಣೆ ಮಾಡಿದೆ. ಹಾಗಾದರೆ ಶನಿವಾರ ಅಥವಾ ಭಾನುವಾರ ಈಗಾಗಲೇ ಮದುವೆ ನಿಗದಿ ಮಾಡಿದವರ ಕಥೆ ಏನು ಎಂದು ಹೆಚ್ಚಿನವರ ಪ್ರಶ್ನೆಯಾಗಿದೆ.
ಸಾರ್ವಜನಿಕರ ಈ ಪ್ರಶ್ನೆಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ಕೆ.ವಿ.ರಾಜೇಂದ್ರ ಮತ್ತು ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಜಂಟಿ ಸುದ್ದಿಗೋಷ್ಠಿ ನಡೆಸಿ ಉತ್ತರ ನೀಡಿದ್ದಾರೆ.
ಶನಿವಾರ ಮತ್ತು ಭಾನುವಾರ ಸಂಪೂರ್ಣ ಲಾಕ್‌ಡೌನ್ ಆಗಿದ್ದರೂ ಆ ಎರಡು ದಿನಗಳಲ್ಲಿ ಈಗಾಗಲೇ ನಿಗದಿಯಾಗಿದ್ದ ಮದುವೆ ನಡೆಸಲು ಅನುಮತಿ ಇದೆ. 50 ಜನರು ಮಾತ್ರ ಮದುವೆಯಲ್ಲಿ ಭಾಗವಹಿಸಲು ಅವಕಾಶವಿದೆ. ಮದುವೆ ಮನೆಯವರು ಆರಂಭದಲ್ಲಿಯೇ ಆ 50 ಜನರ ಪಟ್ಟಿ ತಯಾರಿಸಿ ಸ್ಥಳೀಯಾಡಳಿತಕ್ಕೆ ತೋರಿಸಿ ಅನುಮತಿ ಪಡೆದುಕೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ.
ಮದುವೆಯ ಪೋಟೊ ತೆಗೆಯುವ ಫೋಟೋ ಗ್ರಾಫರ್, ವೀಡಿಯೋ ಗ್ರಾಫರ್, ಅರ್ಚಕರು, ವಾಹನ ಚಾಲಕರು ಎಲ್ಲರೂ ಈ 50 ಜನರ ಪಟ್ಟಿಯಲ್ಲಿ ಬರುತ್ತಾರೆ. ಮದುವೆಗೆ ಹೋಗುವ ಸಂದರ್ಭದಲ್ಲಿ ಅನುಮತಿ ಪಡೆದ 50 ಮಂದಿಯ ಅನುಮತಿ ಪತ್ರ, ಅವರ ಐಡಿ ಕಾರ್ಡ್ ಮತ್ತು ನೈಜ್ಯ ಮದುವೆ ಆಮಂತ್ರಣ ಪತ್ರಿಕೆ ಕಡ್ಡಾಯವಾಗಿ ಹೊಂದಿರಬೇಕು. ಈ ದಾಖಲೆ ಪತ್ರಗಳನ್ನು ಪೊಲೀಸರಿಗೆ ತೋರಿಸಿ ಪ್ರಯಾಣಿಸಬಹುದು. ಮದುವೆಗೆ ಹೋಗುವಾಗ ವಾಹನದಲ್ಲಿ ಜನರನ್ನು ತುಂಬಿಸಿ ಪ್ರಯಾಣಿಸಲು ಅವಕಾಶವಿಲ್ಲ ಎಂದು ಅವರು ತಿಳಿಸಿದ್ದಾರೆ.
ದೇವಸ್ಥಾನದ ಧಾರ್ಮಿಕ ಕಾರ್ಯಗಳನ್ನು ಅರ್ಚಕರು ಮಾತ್ರ ಮಾಡಬೇಕು. ದೇವಸ್ಥಾನದ ಧಾರ್ಮಿಕ ಕಾರ್ಯಗಳಲ್ಲಿ ಯಾವುದೇ ಸಾರ್ವಜನಿಕರು ಭಾಗಿಯಾಗಲು ನಿಷೇಧವಿದೆ. ಈ ಆದೇಶ ಇವತ್ತಿನಿಂದಲೇ ಜಿಲ್ಲೆಯ ಎಲ್ಲಾ ದೇವಸ್ಥಾನಗಳಲ್ಲಿ ಜಾರಿಯಾಗಲಿದೆ ಎಂದಿರುವ ಜಿಲ್ಲಾಧಿಕಾರಿ, ಅವಶ್ಯಕತೆಯ ಪಾಸ್ ಮತ್ತು ಐಡಿ ಕಾರ್ಡ್ ಬಳಸಿ ಪಾಸ್ ಅಥವಾ ಐಡಿ ಕಾರ್ಡ್ ಹೊಂದಿದವರ ಜೊತೆ ಇತರ ಮಂದಿ ಪ್ರಯಾಣಿಸಲು ಅವಕಾಶ ಇಲ್ಲ. ಯಾರ ಹೆಸರಿನಲ್ಲಿ ಪಾಸ್ ಮತ್ತು ಐಡಿ ಕಾರ್ಡ್ ಇದೆಯೋ ಅವರಿಗಷ್ಟೇ ಸಂಚಾರಕ್ಕೆ ಅವಕಾಶ ಎಂದು ಅವರು ತಿಳಿಸಿದರು.
ವೀಕೆಂಡ್ ಕರ್ಫ್ಯೂ ಸಮಯದಲ್ಲಿ ಬೆಳಿಗ್ಗೆ 6ರಿಂದ 10ರ ವರೆಗೆ ಅಗತ್ಯ ವಸ್ತು ಖರೀದಿಗೆ ಅವಕಾಶ ಇದೆ. ಆದರೆ ಈ ವಸ್ತು ಖರೀದಿ ಅವರ ಮನೆಯ ಅಕ್ಕಪಕ್ಕದ ಅಂಗಡಿಯಲ್ಲೇ ಖರೀದಿಸಬೇಕು. ವಾಹನ ಬಳಸಿ ಅಗತ್ಯ ವಸ್ತು ಖರೀದಿಗೆ ಹೋಗುವುದಾದರೂ ಅದಕ್ಕೆ ಸೂಕ್ತ ಕಾರಣ ಬೇಕು. ಅದನ್ನು ದುರುಪಯೋಗ ಪಡಿಸಿಕೊಂಡರೆ ಅಂಥವರ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು. ಅಗತ್ಯ ವಸ್ತುಗಳು ಸಹಜವಾಗಿ ನಡೆದುಕೊಂಡು ಹೋಗುವ ಅಂತರದಲ್ಲೇ ಸಿಗುತ್ತದೆ. ಅಲ್ಲಿಂದಲೇ ಖರೀದಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.