ಮಂಗಳೂರು, ಏಪ್ರಿಲ್ 12: ಮಂಗಳೂರು ನಗರದಿಂದ ರಾಷ್ಟ್ರ ರಾಜಧಾನಿ ನವದೆಹಲಿಗೆ ವಿಮಾನದಲ್ಲಿ ಹೋಗಬೇಕು ಎಂದು ಅಂದುಕೊಂಡವರಿಗೆ ಕಹಿ ಸುದ್ದಿ. ಮಂಗಳೂರು-ನವದೆಹಲಿ ನೇರ ವಿಮಾನಯಾನ ಸೇವೆ ಸ್ಥಗಿತಗೊಂಡಿದೆ.
ಪ್ರಯಾಣಿಕರ ಕೊರತೆಯ ಕಾರಣದಿಂದ ನೇರ ವಿಮಾನಯಾನ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಈಗ ದೆಹಲಿಗೆ ವಿಮಾನದಲ್ಲಿ ಹೋಗಬೇಕು ಎಂದರೆ ಬೆಂಗಳೂರಿಗೆ ತೆರಳಿ, ಅಲ್ಲಿಂದ ದೆಹಲಿಗೆ ಹೋಗಬೇಕು. ಇಲ್ಲವೇ ಮುಂಬೈಗೆ ಹೋಗಿ ಅಲ್ಲಿಂದ ದೆಹಲಿ ತಲುಪಬಹುದು.
ಇಂಡಿಗೋ ಸಂಸ್ಥೆ ಮಂಗಳೂರು-ದೆಹಲಿ ನೇರ ವಿಮಾನಯಾನವನ್ನು ಸ್ಥಗಿತಗೊಳಿಸಿದೆ. ಇಂಡಿಗೋ ಹಾದಿಯನ್ನೇ ಸ್ಪೈಸ್ ಜೆಟ್ ಕಂಪನಿಯೂ ತುಳಿದಿದೆ. ಎರಡೂ ಕಂಪನಿಯ ಯಾವುದೇ ವಿಮಾನ ಮಂಗಳೂರು-ನವದೆಹಲಿ ನಡುವೆ ನೇರವಾಗಿ ಸಂಚಾರ ನಡೆಸುವುದಿಲ್ಲ.
ಲಾಕ್ ಡೌನ್ ತೆರವುಗೊಂಡ ಬಳಿಕ ಎರಡೂ ಕಂಪನಿಗಳ ವಿಮಾನ ಸೇವೆಯನ್ನು ಆರಂಭಿಸಲಾಗಿತ್ತು. ಆದರೆ, ಪ್ರಯಾಣಿಕರ ಸಂಖ್ಯೆ ತೀರಾ ಕಡಿಮೆಯಾಗಿದೆ ಎಂಬ ಕಾರಣಕ್ಕೆ ದೆಹಲಿ ನೇರ ವಿಮಾನ ಸೇವೆಯನ್ನು ನಿಲ್ಲಿಸಲಾಗಿದೆ.
ಪ್ರಯಾಣಿಕರ ಬೇಡಿಕೆಯ ಹೆಚ್ಚಾದರೂ ಮತ್ತೆ ವಿಮಾನ ಸೇವೆ ಆರಂಭಿಸಲು ನಿರ್ಧರಿಸಲಾಗಿದೆ. ಕಡಿಮೆ ಸಂಖ್ಯೆಯ ಪ್ರಯಾಣಿಕರನ್ನು ಹೊತ್ತು ದೆಹಲಿಗೆ ಹಾರಿದರೆ ನಷ್ಟದ ಕೂಪಕ್ಕೆ ಬೀಳುವ ಚಿಂತೆ ಕಂಪನಿಗಳದ್ದಾಗಿದೆ.
ಇಂಡಿಗೋ ವಿಮಾನಯಾನ ಕಂಪನಿ ತನ್ನ ಸಮಯವನ್ನು ಪರಿಷ್ಕರಿಸಿ ಮತ್ತೆ ಮಂಗಳೂರು-ನವದೆಹಲಿ ವಿಮಾನ ಸೇವೆಯನ್ನು ಆರಂಭಿಸಬೇಕು ಎಂದು ಪ್ರಯಾಣಿಕರು ಬೇಡಿಕೆ ಇಟ್ಟಿದ್ದಾರೆ.