Saturday, April 6, 2024

ಹೆದ್ದಾರಿ ದರೋಡೆ ಸಂಚು ತಡೆದ ಮಂಗಳೂರು ಪೊಲೀಸರು: ಕುಖ್ಯಾತ T.B ಗ್ಯಾಂಗ್ ನ 8 ಆರೋಪಿಗಳ ಬಂಧನ

ಮಂಗಳೂರು: ಮಂಗಳೂರು ನಗರ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರಾತ್ರಿ ವೇಳೆಯಲ್ಲಿ ಹೆದ್ದಾರಿಯಲ್ಲಿ ದರೋಡೆ ನಡೆಸಲು ಸಂಚು ರೂಪಿಸಿದ್ದ ಕುಖ್ಯಾತ ಟಿ.ಬಿ ಗ್ಯಾಂಗ್ ನ ಎಂಟು ಮಂದಿಯನ್ನು ಪೊಲೀಸರು ಸೆರೆ ಹಿಡಿದಿದ್ದಾರೆ.

ಮಂಗಳೂರಿನ ಮಾರ್ನಮಿಕಟ್ಟೆ ನಿವಾಸಿ ತೌಸಿರ್ ಯಾನೆ ಪತ್ತೊಂಜಿ ತೌಸಿರ್ (28 ವ), ಫರಂಗಿಪೇಟೆ ನಿವಾಸಿ ಮೊಹಮ್ಮದ್ ಅರಾಫತ್ (29 ವ), ತಸ್ಲಿಂ ( 27 ವ), ತುಂಬೆ ನಿವಾಸಿ ನಾಸೀರ್ ಹುಸೇನ್ ( 37 ವ), ಪುದು ನಿವಾಸಿ ಮೊಹಮ್ಮದ್ ರಫೀಕ್ (37 ವ), ಮೊಹಮ್ಮದ್ ಸಫ್ವಾನ್ ( 25 ವ), ಮೊಹಮ್ಮದ್ ಜೈನುದ್ದೀನ್ ( 24ವ) ಮತ್ತು ಮೊಹಮ್ಮದ್ ಉನೈಜ್ (26 ವ) ಬಂಧಿತ ಆರೋಪಿಗಳಾಗಿದ್ದಾರೆ.

ಎ.12ರಂದು ರಾತ್ರಿ ಮಂಗಳೂರು ಗ್ರಾಮಾಂತರ ಠಾಣೆ ವ್ಯಾಪ್ತಿಯ ಉಳಾಯಿಬೆಟ್ಟು ಗ್ರಾಮದ ಪರಾರಿ ಎಂಬಲ್ಲಿ ಇನ್ನೋವಾ ಕಾರನ್ನು ರಸ್ತೆ ಬದಿ ಪಾರ್ಕ್ ಮಾಡಿ, ಮಾರಾಕಾಯುಧಗಳೊಂದಿಗೆ ಗುಂಪಾಗಿ ನಿಂತುಕೊಂಡು ಹಾದುಹೋಗುವ ವಾಹನಗಳನ್ನು ಅಡ್ಡಹಾಕಲು ಯತ್ನಿಸುತ್ತಿದ್ದರು. ಈ ವೇಳೆ ಸ್ಥಳಕ್ಕೆ ದಾಳಿ ನಡೆಸಿದ ಸಿಸಿಬಿ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

ಆರೋಪಿಗಳಿಂದ ಎರಡು ತಲವಾರು, ಒಂದು ಡ್ರಾಗನ್ ಚೂರಿ, ಎಂಟು ಮೊಬೈಲ್, ಐದು ಮಂಕಿ ಕ್ಯಾಪ್, ಮೂರು ಪ್ಯಾಕೆಟ್ ಮೆಣಸಿನ ಹುಡಿ ಮತ್ತು ಒಂದು ಇನ್ನೋವಾ ಕಾರು ಸೇರಿದಂತೆ ಒಟ್ಟು 10,89,490 ರೂ. ಮೌಲ್ಯದ ಸೊತ್ತನ್ನು ವಶಪಡಿಸಿಕೊಳ್ಳಲಾಗಿದೆ.

ಟಿ.ಬಿ ಗ್ಯಾಂಗ್: ಪ್ರಕರಣದಲ್ಲಿ ಸಿಕ್ಕಿಬಿದ್ದಿರುವ ಪತ್ತೊಂಜಿ ತೌಸಿರ್ ಮತ್ತು ಸೌದಿ ಅರೇಬಿಯಾದಲ್ಲಿ ತಲೆಮರೆಸಿಕೊಂಡಿರುವ ರೌಡಿ ಬಾತಿಶ್ ಈ ಟಿ.ಬಿ ಗ್ಯಾಂಗ್ ( ತೌಸಿರ್ ಆಯಂಡ್ ಬಾತಿಶ್) ನಡೆಸಿಕೊಂಡು ಬರುತ್ತಿದ್ದರು. ಬಾತಿಶ್ ನ ಸೂಚನೆಯಂತೆ ಮಂಗಳೂರಿನ ಹಲವಾರು ವ್ಯಕ್ತಿಗಳ ಹಣದ ವ್ಯವಹಾರವನ್ನು ತೌಸಿರ್ ಮತ್ತು ಇತರರು ಮಾಡುತ್ತಿದ್ದರು.

ಬಿ.ಸಿ.ರೋಡ್ ನ ಮೇಲ್ಕಾರ್ ಮೂಲದ ಸದ್ಯ ಬೆಂಗಳೂರಿನಲ್ಲಿರುವ ಝೀಯದ್ ಎಂಬಾತನಿಗೆ ತೌಸಿರ್ ಗ್ಯಾಂಗ್ ನ ಸಫ್ವಾನ್ ಎಂಬಾತ 12 ಲಕ್ಷ ಹಣ ನೀಡಿದ್ದು, ಅದನ್ನು ವಾಪಾಸು ನೀಡದೇ ಇರುವ ಕಾರಣ ಬಾತಿಶ್ ನ ಸೂಚನೆಯಂತೆ ಝೀಯದ್ ನನ್ನು ಅಪಹರಿಸಿ ಕೊಲೆ ಮಾಡಲು ಸ್ಕೆಚ್ ಹಾಕಿದ್ದರು. ಆದರಂತೆ ಬೆಂಗಳೂರಿಗೆ ತೆರಳಿದ್ದ ತಂಡಕ್ಕೆ ಝೀಯದ್ ಸಿಕ್ಕಿರಲಿಲ್ಲ. ಹೀಗಾಗಿ ಮಂಗಳೂರಿಗೆ ಬಂದು ಹೆದ್ದಾರಿ ದರೋಡೆ ಮಾಡಲು ಸಂಚು ಹೂಡಿದ್ದರು.

ಆರೋಪಿ ತೌಸಿರ್ ವಿರುದ್ಧ ಈಗಾಗಲೇ ಕೊಲೆ ಯತ್ನ, ದರೋಡೆ ಸೇರಿದಂತೆ ಆರು ಪ್ರಕರಣಗಳಿದ್ದು, 2020ರಲ್ಲಿ ಧರ್ಮಸ್ಥಳ ಠಾಣಾ ವ್ಯಾಪ್ತಿಯಲ್ಲಿ ಮನೆಯೊಂದರ ದರೋಡೆಗೆ ವಿಫಲ ಯತ್ನ ನಡೆಸಿ, ಆ ಮನೆಯಲ್ಲಿದ್ದ ಸಾಕು ನಾಯಿಯನ್ನು ಕಡಿದು ಕೊಂದಿದ್ದ.

ಮತ್ತೋರ್ವ ಆರೋಪಿ ತಸ್ಲಿಂ 2017ರಲ್ಲಿ ಫರಂಗಿಪೇಟೆಯಲ್ಲಿ ನಡೆದ ಝಿಯಾ ಮತ್ತು ಫಯಾಸ್ ಜೋಡಿ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ. ಧರ್ಮಸ್ಥಳ ದರೋಡೆ ಯತ್ನ ಪ್ರಕರಣದಲ್ಲೂ ಭಾಗಿಯಾಗಿದ್ದು, ತಲೆಮರೆಸಿಕೊಂಡಿದ್ದ.

More from the blog

ನೀತಿ ಸಂಹಿತೆ ಉಲ್ಲಂಘನೆ : ಕೋಟಾ ಶ್ರೀನಿವಾಸ್‌ ಪೂಜಾರಿಗೆ ಕೋರ್ಟ್‌ ಸಮನ್ಸ್‌

ಬೆಂಗಳೂರು: ಬಿಜೆಪಿ ಅಭ್ಯರ್ಥಿ ಕೋಟಾ ಶ್ರೀನಿವಾಸ್‌ ಪೂಜಾರಿ ಅವರಿಗೆ ಕೋರ್ಟ್‌ ಸಮನ್ಸ್‌ ಜಾರಿ ಮಾಡಿದೆ. ಕೋಟಾ ಶ್ರೀನಿವಾಸ ಪೂಜಾರಿ, ಗುರ್ಮೆ ಸುರೇಶ್ ಶೆಟ್ಟಿ, ಲಾಲಾಜಿ ಮೆಂಡನ್ ಹಾಗೂ ಶಾಲಾ ಆಡಳಿತ ಮಂಡಳಿಗೆ ಜನಪ್ರತಿನಿಧಿಗಳ ವಿಶೇಷ...

ಸರ್ಕಾರದ ಕೋವಿ ಠೇವಣಿ ಕ್ರಮ: ಪರವಾನಿಗೆ ಪಡೆದ ರೈತರಿಂದ ಚುನಾವಣೆ ಬಹಿಷ್ಕಾರ 

ವಿಟ್ಲ: ಕರ್ನಾಟಕ ರಾಜ್ಯ ರೈತ ಸಂಘ ಹಸಿರುಸೇನೆಯ ದ.ಕ.ಜಿಲ್ಲಾ ಸಮಿತಿ ಮತ್ತು ಕೋವಿ ಪರವಾನಿಗೆ ಪಡೆದ ರೈತ ಬಳಕೆದಾರರ ಸಂಘವು ಈ ಬಾರಿ ಚುನಾವಣೆ ಬಹಿಷ್ಕರಿಸುತ್ತದೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಶ್ರೀಧರ...

ಟ್ರಾಫಿಕ್ ಪೊಲೀಸ್ ಠಾಣೆಯ ಕಾಮಗಾರಿಯನ್ನು ಪೊಲೀಸ್ ಹೌಸಿಂಗ್ ಕಾರ್ಪೋರೇಸನ್ ಎಡಿಜಿಪಿ ರಾಮಚಂದ್ರರಾವ್ ವೀಕ್ಷಣೆ

ಬಂಟ್ವಾಳ; ಬಿಸಿರೋಡಿನ ಪಾಣೆಮಂಗಳೂರಿನಲ್ಲಿ ಅಂದಾಜು ರೂ.3.18 ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಟ್ರಾಫಿಕ್ ಪೋಲೀಸ್ ಠಾಣೆಯ ಕಾಮಗಾರಿಯನ್ನು ಪೋಲಿಸ್ ಹೌಸಿಂಗ್ ಕಾರ್ಪೋರೇಸನ್ ಎಡಿಜಿಪಿ ರಾಮಚಂದ್ರರಾವ್ ವೀಕ್ಷಣೆ ನಡೆಸಿದರು. ಉತ್ತಮ ಗುಣಮಟ್ಟದಲ್ಲಿ ಠಾಣೆಯ ಕೆಲಸವನ್ನು ಮಾಡುವ...

ಸೌಜನ್ಯ ಹೋರಾಟ ಸಮಿತಿಯಿಂದ ನೋಟ ಅಭಿಯಾನ

ಮಂಗಳೂರು: ರಾಜಕೀಯ ಪಕ್ಷಗಳು ಮತ್ತು ನ್ಯಾಯಾಂಗ ವ್ಯವಸ್ಥೆಯ ಗಮನ ಸೆಳೆಯುವ ಉದ್ದೇಶದಿಂದ ಸೌಜನ್ಯ ಪರ ಹೋರಾಟ ಸಮಿತಿ ವತಿಯಿಂದ ಮುಂಬರುವ‌ ಲೋಕಸಭಾ ಚುನಾವಣೆಯಲ್ಲಿ ನೋಟಕ್ಕೆ ಮತ ಚಲಾಯಿಸಲು ಜನ ಸಾಮಾನ್ಯರನ್ನು ಪ್ರೇರೇಪಿಸಲು ನೋಟ...