ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಲಾಕ್ ಡೌನ್ ಮಾಡುವ ಅನಿವಾರ್ಯತೆ ಎದುರಾದರೆ ಲಾಕ್ ಡೌನ್ ಮಾಡಲಾಗುತ್ತದೆ ಎಂದು ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ಅದರಲ್ಲೂ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ನಿಯಂತ್ರಣಕ್ಕೆ ಸಿಗುತ್ತಿಲ್ಲವಾದ ಕಾರಣ ಒಟ್ಟು 8 ನಗರಗಳಲ್ಲಿ ನೈಟ್ ಕರ್ಫ್ಯೂ ಜಾರಿ ಮಾಡಲಾಗಿದೆ.
ಇಷ್ಟಾದರೂ ಸಹ ಜನತೆ ಮಾಸ್ಕ್ ಧರಿಸದಿರುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳದಿರುವುದು ಕಂಡುಬರುತ್ತಿದೆ. ಹೀಗಾಗಿ ಸರ್ಕಾರ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಪದೇ ಪದೇ ಸಾರ್ವಜನಿಕರನ್ನು ಎಚ್ಚರಿಸುತ್ತಿದೆ.
ಇದೀಗ ಲಾಕ್ಡೌನ್ ಕುರಿತಂತೆ ಮುಖ್ಯಮಂತ್ರಿ ಯಡಿಯೂರಪ್ಪನವರು ಮಹತ್ವದ ಹೇಳಿಕೆ ನೀಡಿದ್ದು, ಜನ ಸಹಕರಿಸದಿದ್ದರೆ ಲಾಕ್ಡೌನ್ ಅನಿವಾರ್ಯವಾಗಬಹುದು ಎಂದಿದ್ದಾರೆ. ಸರ್ವಪಕ್ಷ ಪಕ್ಷ ಸಭೆ ಕರೆದು ಲಾಕ್ ಡೌನ್ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. ಬೀದರ್ ನಲ್ಲಿ ಮಾತನಾಡಿರುವ ಅವರು ಈಗಲಾದರೂ ಜನತೆ ಎಚ್ಚೆತ್ತುಕೊಂಡು ಮಾರ್ಗಸೂಚಿ ಅನುಸರಿಸಬೇಕು ಇಲ್ಲದಿದ್ದರೆ ಸರ್ಕಾರದ ಮುಂದೆ ಲಾಕ್ಡೌನ್ ಮಾಡುವ ವಿನಃ ಪರ್ಯಾಯ ಮಾರ್ಗವಿರುವುದಿಲ್ಲ ಎಂದಿದ್ದಾರೆ.