ಬಂಟ್ವಾಳ: ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರ ವತಿಯಿಂದ ಶ್ರೀರಾಮ ಪದವಿ ಕಾಲೇಜಿನ ರೆಡ್ ಕ್ರಾಸ್ ಘಟಕ ಹಾಗೂ ಕೆ.ಎಸ್.ಹೆಗ್ಡೆ ವೈದ್ಯಕೀಯ ಕಾಲೇಜು ಸಂಯುಕ್ತ ಆಶ್ರಯದಲ್ಲಿ ರಕ್ತದಾನ ಶಿಬಿರ ಸರ್ಕಾರದ ಕೋವಿಡ್ ಮಾರ್ಗಸೂಚಿಯನ್ನು ಪಾಲಿಸಿಕೊಂಡು ಶುಕ್ರವಾರ ನಡೆಯಿತು.
ಸುಮಾರು 130ಕ್ಕೂ ಅಧಿಕ ಮಂದಿ ರಕ್ತದಾನ ಮಾಡಿದರು. ಬೆಳಗ್ಗೆ 9.30ಕ್ಕೆ ಆರಂಭಗೊಂಡ ಶಿಬಿರ ಮಧ್ಯಾಹ್ನ 1 ಗಂಟೆವರೆಗೆ ನಡೆಯಿತು. ಶಿಬಿರಕ್ಕೆ ಅಗತ್ಯವಿದ್ದ ಸಂಖ್ಯೆಗಿಂತ ಅಧಿಕ ಮಂದಿ ಆಗಮಿಸಿದ ಹಿನ್ನೆಲೆಯಲ್ಲಿ ಉಳಿದ ಶಿಬಿರಾರ್ಥಿಗಳನ್ನು ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿಕೊಡಲಾಯಿತು.
ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ್ ಭಟ್ ಕಲ್ಲಡ್ಕ ಉದ್ಘಾಟಿಸಿ ರಕ್ತದಾನ ಶಿಬಿರದ ಅಗತ್ಯವನ್ನು ಹೇಳಿ, ಮೇ 1ರಿಂದ 18 ವರ್ಷ ಮೇಲ್ಪಟ್ಟ ಎಲ್ಲರಿಗೆ ಲಸಿಕೆ ಹಾಕಿಸಿ ಕೊಳ್ಳಬೇಕಾಗಿರುವುದರಿಂದ ನಂತರದ ಎರಡರಿಂದ ಮೂರು ತಿಂಗಳು ರಕ್ತದಾನಕ್ಕೆ ಅವಕಾಶವಿರುವುದಿಲ್ಲ, ಈ ಹಿನ್ನಲೆಯಲ್ಲಿ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿರುವುದಾಗಿ ತಿಳಿಸಿದರು.
ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕ ವಸಂತ ಮಾಧವ, ಆಡಳಿತ ಮಂಡಳಿಯ ಸದಸ್ಯೆ ಲಕ್ಷ್ಮೀ ರಘುರಾಜ್, ಆಡಳಿತ ಮಂಡಳಿ, ಅಧ್ಯಾಪಕ ವೃಂದ, ವಿದ್ಯಾರ್ಥಿಗಳು, ಹಿರಿಯ ವಿದ್ಯಾರ್ಥಿಗಳು, ಕಲ್ಲಡ್ಕ ಪರಿಸರದ ವಿವಿಧ ಸಂಘಸಂಸ್ಥೆಗಳ ಸದಸ್ಯರು ಉಪಸ್ಥಿತರಿದ್ದು, ಪ್ರಕ್ರಿಯೆಯಲ್ಲಿ ಪಾಲ್ಗೊಂಡರು.