ದೆಹಲಿ: ಕೆಲವು ಸಂಖ್ಯೆಯನ್ನು ಬರೆದಿದ್ದ ಬಿಳಿ ಚೀಟಿಯೊಂದನ್ನು ಕಾಲಿಗೆ ಕಟ್ಟಿಕೊಂಡು ಪಾಕಿಸ್ತಾನದಿಂದ ಭಾರತದ ಗಡಿಯೊಳಗೆ ಹಾರಿ ಬಂದ ಪಾರಿವಾಳದ ವಿರುದ್ಧ ಕೊನೆಗೂ ಎಫ್‌ಐಆರ್ ದಾಖಲಾಗಿದ್ದು ಪಾರಿವಾಳವನ್ನು ಜೈಲಿನಲ್ಲಿ ಇಡಲಾಗಿದೆ.
ಪಾಕಿಸ್ತಾನದಿಂದ ಭಾರತದೊಳಗೆ ಹಾರಿ ಬಂದಿರುವ ಈ ಪಾರಿವಾಳದ ವಿರುದ್ಧ ಗೂಢಚಾರಿಕೆ ನಡೆಸಿದ ಆರೋಪ ಇದೆ. ಬಿಎಸ್‌ಎಫ್ ಅಧಿಕಾರಿಗಳು ಒತ್ತಾಯದಂತೆ ಪೊಲೀಸರು ಎಫ್‌ಐಆರ್ ದಾಖಲಿಸಿ ಜೈಲಿನಲ್ಲಿ ಇಟ್ಟಿದ್ದಾರೆ.
ಶನಿವಾರ ಪಾಕಿಸ್ತಾನ – ಭಾರತದ ಗಡಿ ಪ್ರದೇಶವಾದ ರೊರಾವಾಲಾ ಪೋಸ್ಟ್ನಲ್ಲಿರುವ ಗಡಿ ಭದ್ರತಾ ಪಡೆಯ ಜವಾನರೊಬ್ಬರ ಭುಜದ ಮೇಲೆ ಈ ಪಾರಿವಾಳವೊಂದು ತಾನಾಗಿ ಬಂದು ಕೂತಿದೆ. ಜವಾನ ಪಾರಿವಾಳವನ್ನು ಹಿಡಿದು ಪರಿಶೀಲಿಸಿದಾಗ ಪಾರಿವಾಳದ ಕಾಲಿನಲ್ಲಿ ಸಣ್ಣ ಬಿಳಿ ಪೇಪರ್ ತುಂಡನ್ನು ಕಟ್ಟಲಾಗಿತ್ತು. ಈ ಪೇಪರ್‌ನಲ್ಲಿ ಕೆಲವು ಸಂಖ್ಯೆಗಳನ್ನು ಬರೆಯಲಾಗಿತ್ತು.
ಪಾರಿವಾಳದ ವಿರುದ್ಧ ಎಫ್‌ಐಆರ್ ದಾಖಲಿಸಿರುವ ಬಗ್ಗೆ ಮಾತನಾಡಿರುವ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಧ್ರುವ್ ದಹಿಯಾ, ಪಾರಿವಾಳದ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಬಿಎಸ್‌ಎಫ್ ಒತ್ತಾಯಿಸಿದೆ. ಪಾರಿವಾಳ ಒಂದು ಪಕ್ಷಿಯಾಗಿರುವುದರಿಂದ ಅದರ ಮೇಲಿನ ಕಾನೂನು ಕ್ರಮದ ಬಗ್ಗೆ ಅಭಿಪ್ರಾಯ ಕೇಳಿ ಪ್ರಕರಣವನ್ನು ಕಾನೂನು ತಜ್ಞರಿಗೆ ಹಸ್ತಾಂತರಿಸಿದ್ದೇವೆ ಎಂದು ಹೇಳಿದ್ದಾರೆ.