ಬಂಟ್ವಾಳ: ಕೊರೋನ ವೈರಸ್ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರಕಾರದ ಮಾರ್ಗಸೂಚಿಯನ್ನು ಪಾಲಿಸದ ಅಂಗಡಿಗಳ ಮಾಲಕರಿಗೆ ಬಂಟ್ವಾಳ, ವಿಟ್ಲ ಪೊಲೀಸರು ಮತ್ತು ಬಂಟ್ವಾಳ ಪುರಸಭೆಯ ಅಧಿಕಾರಿಗಳು ಶುಕ್ರವಾರ ಸಾವಿರಾರು ರೂಪಾಯಿ ದಂಡ ವಿಧಿಸಿದರು.
ತಾಲೂಕಿನ ವಿವಿಧೆಡೆ ಬೆಳಗ್ಗೆಯಿಂದ ಕಾರ್ಯಾಚರಣೆ ನಡೆಸಿದ ಪೊಲೀಸರು ಮತ್ತು ಪುರಸಭೆಯ ಅಧಿಕಾರಿಗಳು ಬಾಗಿಲು ತೆರೆದಿದ್ದ ಅಗತ್ಯ ವಸ್ತುಗಳು ಅಲ್ಲದ ಅಂಗಡಿಗಳನ್ನು ಬಂದ್ ಮಾಡಿಸಿದರು.
ಗ್ರಾಹಕರಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ವಿಫಲವಾದ ಫಂರಗಿಪೆಟೆಯ ಮೀನು ಮಾರುಕಟ್ಟೆಯ ವ್ಯಾಪಾರಿಗಳು ಮತ್ತು ಒಂದು ತರಕಾರಿ ಅಂಗಡಿ, ಕೈಕಂಬ ಮತ್ತು ಆಲಡ್ಕದಲ್ಲಿ ತಲಾ ಒಂದು ತರಕಾರಿ ಅಂಗಡಿ, ವಿಟ್ಲದಲ್ಲಿ ಒಂದು ತರಕಾರಿ ಅಂಗಡಿಯ ಮಾಲಕರಿಗೆ ಪೊಲೀಸರು ದಂಡ ವಿಧಿಸಿದರು.
ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್.ಆರ್., ಬಂಟ್ವಾಳ ಗ್ರಾಮಾಂತರ ಠಾಣೆಯ ಎಸ್ಸೈ ಪ್ರಸನ್ನ ಕುಮಾರ್, ನಗರ ಠಾಣೆಯ ಇನ್ ಸ್ಪೆಕ್ಟರ್ ಚೆಲುವರಾಜ್, ಎಸ್ಸೈ ಅವಿನಾಶ್, ವಿಟ್ಲ ಠಾಣೆಯ ಎಸ್ಸೈ ವಿನೋದ್ ಕುಮಾರ್ ರೆಡ್ಡಿ ಹಾಗೂ ಪೊಲೀಸ್ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು.
ಬಂಟ್ವಾಳ ಪುರಸಭೆ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಿದ ಬಂಟ್ವಾಳ ಪುರಸಭೆಯ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೊ ನೇತೃತ್ವದ ಅಧಿಕಾರಿಗಳ ತಂಡ ಹಲವು ಅಂಗಡಿಗಳ ಮಾಲಕರಿಂದ ಒಟ್ಟು 4,600 ರೂಪಾಯಿ ದಂಡ ವಸೂಲಿ ಮಾಡಿದರು. ಕೊರೋನ ಎರಡನೇ ಅಲೆ ಆರಂಭವಾದ ಬಳಿಕ ಪುರಸಭೆ ಅಧಿಕಾರಿಗಳು ಒಟ್ಟು 28,800 ರೂಪಾಯಿ ದಂಡ ವಸೂಲಿ ಮಾಡಿದೆ ಎಂದು ಮುಖ್ಯಾಧಿಕಾರಿ ತಿಳಿಸಿದ್ದಾರೆ.
ಕೊರೋನ ನಿಯಂತ್ರಣಕ್ಕೆ ರಾಜ್ಯ ಸರಕಾರ ಹೊಸ ಮಾರ್ಗಸೂಚಿಯನ್ನು ಜಾರಿ ಮಾಡಿದ್ದು ಅದರಂತೆ ಬಹುತೇಕ ಅಂಗಡಿಗಳು ಶುಕ್ರವಾರ ಬೆಳಗ್ಗೆಯೇ ಬಂದ್ ಆಗಿತ್ತು. ಬಾಗಿಲು ತೆರೆದಿದ್ದ ಅಗತ್ಯ ವಸ್ತುಗಳು ಅಲ್ಲದ ಕೆಲವು ಅಂಗಡಿಗಳನ್ನು ಪೊಲೀಸರು ಮತ್ತು ಅಧಿಕಾರಿಗಳು ಬಂದ್ ಮಾಡಿಸಿದರು. ದಿನಸಿ, ತರಕಾರಿ, ಮೀನು, ಮಾಂಸ, ಮೆಡಿಕಲ್ ಸಹಿತ ಅಗತ್ಯ ವಸ್ತುಗಳ ಅಂಗಡಿಗಳಿಗೆ ವ್ಯಾಪಾರ ನಡೆಸಲು ಅನುಮತಿ ಇದೆಯಾದರೂ ಕೋವಿಡ್ ನಿಯಂತ್ರಣದ ಎಲ್ಲಾ ಮಾರ್ಗಸೂಚಿಯನ್ನು ಪಾಲಿಸಿ ವ್ಯಾಪಾರ ನಡೆಸುವಂತೆ ಸರಕಾರ ಎಚ್ಚರಿಕೆ ನೀಡಿದೆ.
ಶುಕ್ರವಾರ ರಾತ್ರಿ 9 ಗಂಟೆಯಿಂದ ಸೋಮವಾರ ಬೆಳಗ್ಗೆ 6 ಗಂಟೆಯ ವರೆಗೆ ಸಂಪೂರ್ಣ ಲಾಕ್ ಡೌನ್ ಇರಲಿದೆ. ಶನಿವಾರ ಮತ್ತು ರವಿವಾರ ಬೆಳಗ್ಗೆ 7ರಿಂದ 10ರ ವರೆಗೆ ಅಗತ್ಯ ವಸ್ತುಗಳ ಅಂಗಡಿಗಳು ತೆರೆಯಲು ಅವಕಾಶ ಇದೆ. ಆದರೆ ಗ್ರಾಹಕರು ನಡೆದುಕೊಂಡು ಹೋಗಿ ಬರಬಹುದಾದ ಅಂಗಡಿಯಿಂದ ಅಗತ್ಯ ವಸ್ತುಗಳನ್ನು ಖರೀದಿಸುವಂತೆ ಪೊಲೀಸರು ತಿಳಿಸಿದ್ದಾರೆ. ಇಲಾಖೆ ಎರಡು ದಿನ ಲಾಕ್ ಡೌನ್ ಅನ್ನು ಕಠಿಣವಾಗಿ ನಿರ್ವಹಿಸಲಿದ್ದು ಯಾವುದೇ ಸೂಕ್ತ ಕಾರಣವಿಲ್ಲದೆ ವಾಹನದಲ್ಲಿ ಸುತ್ತಾಡಿದರೆ ಅಂತಹ ವಾಹನಗಳನ್ನು ಜಪ್ತಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.