ದೆಹಲಿ: ಇಡೀ ವಿಶ್ವವನ್ನೇ ಅಲ್ಲೋಲಕಲ್ಲೋಲ ಮಾಡಿರುವ ಕೊರೋನ ವೈರಸ್‌ಗೆ ಜಗತ್ತಿನಾದ್ಯಂತ ಕೋಟ್ಯಂತರ ಮಂದಿ ತುತ್ತಾಗಿದ್ದು ಲಕ್ಷಾಂತರ ಮಂದಿ ಸಾವನಪ್ಪಿದ್ದಾರೆ. ಈ ನಡುವೆ ಕೊರೋನ ಎರಡನೇ ಅಲೆಯ ಅಬ್ಬರಕ್ಕೆ ದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರಾಜಕಾರಣಿಗಳಲ್ಲಿ ಪಾಸಿಟಿವ್ ಪ್ರಕರಣ ವರದಿಯಾಗುತ್ತಿದೆ.
ಕಳೆದ ವರ್ಷ ಕೊರೋನದ ಮೊದಲ ಅಲೆಯ ಬಳಿಕ ಈ ಮಹಾ ಮಾರಿ ವೈರಸ್ ಸಾಮಾನ್ಯರಿಂದ ವಿವಿಧ ದೇಶಗಳ ಪ್ರಮುಖ ರಾಜಕಾರಣಿಗಳ ಬಲಿ ಪಡೆದಿದೆ. ಇದೀಗ ಎರಡನೇ ಅಲೆಯ ಅಬ್ಬರಕ್ಕೆ ಜಗತ್ತು ಮತ್ತೊಮ್ಮೆ ತತ್ತರಿಸಿದೆ. ಸಾವು ನೋವಿನ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಸಾಗುತ್ತಿದೆ.
ಭಾರತ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,40,74,564ಕ್ಕೆ ಏರಿಕೆಯಾದರೆ ಇದುವರೆಗೆ ಒಟ್ಟು 1,73,123 ಜನರನ್ನು ಈ ಮಾರಕ ವೈರಸ್ ಬಲಿ ಪಡೆದಿದೆ. ಹಾಗೆಯೇ 1,24,29,564 ಸೋಂಕಿತರು ಗುಣಮುಖರಾಗಿದ್ದಾರೆ. ಪ್ರಸಕ್ತ ದೇಶದಲ್ಲಿ 14,71,877 ಕೊರೊನಾ ವೈರಸ್ ಸಕ್ರಿಯ ಪ್ರಕರಣಗಳಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.
ದೇಶದಲ್ಲಿ ಕೊರೋನ ಎರಡನೇ ಅಲೆ ಮುಂದುವರಿಯುತ್ತಿದ್ದAತೆ ದೇಶದ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು, ಪ್ರಭಾವಿ ರಾಜಕಾರಣಿಗಳು ಈ ವೈರಸ್‌ಗೆ ತುತ್ತಾಗಿದ್ದಾರೆ.
ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ಉತ್ತರ ಪ್ರದೇಶದ ಸಚಿವ ಆಶುತೋಶ್ ಟಂಡನ್, ನವದೆಹಲಿಯ ಸಾರಿಗೆ ಸಚಿವ ಕೈಲಾಶ್ ಗಹ್ಲೋಟ್, ಕೇಂದ್ರ ಸಚಿವ ಸಂಜೀವ್ ಬಾಲ್ಯಾನ್, ಸಿಪಿಐ ಮುಖಂಡ ಡಿ ರಾಜಾ, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಕೇರಳದ ಹಿರಿಯ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಅವರಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ.