ಬೆಂಗಳೂರು: ಕರ್ನಾಟಕದಲ್ಲಿ ಕೊರೋನ ಎರಡನೆ ಅಲೆಯ ಅಬ್ಬರ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಪರಿಸ್ಥಿತಿ ಕೈ ಮೀರುವ ಹಂತಕ್ಕೆ ತಲುಪುತ್ತಿದ್ದೆ. ಗುರುವಾರ ಒಂದೇ ದಿನ ರಾಜ್ಯದಲ್ಲಿ 15 ಸಾವಿರದಷ್ಟು ಮಂದಿಗೆ ಕೊರೋನ ಸೋಂಕು ದೃಢಪಟ್ಟಿದೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು ಪ್ರಮುಖ ಸಚಿವರ ಸಹಿತ ಉನ್ನತ ಮಟ್ಟದ ಅಧಿಕಾರಿಗಳ ಮಹತ್ವದ ತುರ್ತು ಸಭೆ ಕರೆದಿದ್ದು ಸಭೆಯಲ್ಲಿ ಕೊರೋನ ನಿಯಂತ್ರಣಕ್ಕೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.
ಸಭೆಯ ಬಳಿಕ ರಾಜ್ಯದಲ್ಲಿ ವಾರಾಂತ್ಯ ಲಾಕ್ ಡೌನ್, ಇಡೀ ರಾಜ್ಯದಲ್ಲಿ ರಾತ್ರಿ ಕರ್ಪ್ಯೂ ವಿಸ್ತರಣೆ ಮಾಡುವ ಕ್ರಮಗಳನ್ನು ಘೋಷಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಆದರೆ ಏಪ್ರಿಲ್ 18ರಂದು ಭಾನುವಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಡೆಯುವ ಸರ್ವಪಕ್ಷಗಳ ನಾಯಕರ ಸಭೆಯಲ್ಲಿ ಚರ್ಚಿಸಿದ ಬಳಿಕ ವಾರಂತ್ಯದ ಲಾಕ್ ಡೌನ್, ರಾಜ್ಯಾದ್ಯಂತ ರಾತ್ರಿ ಕರ್ಪ್ಯೂ ವಿಸ್ತರಣೆಯಂಥ ಕ್ರಮಗಳನ್ನು ಘೋಷಿಸುವ ಬಗ್ಗೆ ನಿರ್ಧಾರ ಕೈಗೊಳ್ಳುವ ಸಾಧ್ಯತೆಯೂ ಇದೆ ಎಂದು ತಿಳಿದುಬಂದಿದೆ.
ಮಾರುಕಟ್ಟೆ, ಮಾಲ್ ಸೇರಿದಂತೆ ಹೆಚ್ಚು ಜನರು ಸೇರುವ ಸ್ಥಳಗಳಲ್ಲಿ ಮತ್ತಷ್ಟು ಕಠಿಣ ನಿಯಮಗಳನ್ನು ಜಾರಿಗೊಳಿಸಲು ರಾಜ್ಯ ಸರಕಾರ ಮುಂದಾಗಿದೆ ಎಂದು ಹೇಳಲಾಗುತ್ತಿದೆ.