ಮಂಗಳೂರು: ಇಲ್ಲಿನ ಬಜಪೆ ವಿಮಾನ ನಿಲ್ದಾಣದಲ್ಲಿ ಸೋಮವಾರ ಮಧ್ಯರಾತ್ರಿ ಲ್ಯಾಂಡ್ ಆಗಬೇಕಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ಹವಾಮಾನ ವೈಪರೀತ್ಯದ ಕಾರಣದಿಂದ ಕೊಚ್ಚಿಯಲ್ಲಿ ಇಳಿಯಿತು. ಇದರಿಂದ ಪ್ರಯಾಣಿಕರು ಪರದಾಟ ನಡೆಸಬೇಕಾದ ಪ್ರಸಂಗ ಎದುರಾಯಿತು. ದುಬೈನಿಂದ ಮಂಗಳೂರಿಗೆ 118 ಪ್ರಯಾಣಿಕರನ್ನು ಏರ್ ಇಂಡಿಯಾ 1XE 384 ವಿಮಾನ ಹೊರಟಿತ್ತು. ಮಧ್ಯರಾತ್ರಿ 12:30 ಕ್ಕೆ ಸಮಯದಲ್ಲಿ ಬಜಪೆ ವಿಮಾನ ನಿಲ್ದಾಣದಲ್ಲಿ ಇಳಿಯಬೇಕಿತ್ತು. ಆದರೆ ಮಂಗಳೂರಿನಲ್ಲಿ ಸಿಡಿಲು ಮಳೆಯಾಗುತ್ತಿದ್ದ ಕಾರಣ ಲ್ಯಾಂಡ್ ಮಾಡಲಾಗದೆ ಕೊಚ್ಚಿಗೆ ತೆರಳಿತ್ತು.ತಡರಾತ್ರಿ ಏಕಾಏಕಿ ಕೊಚ್ಚಿಯಲ್ಲಿ ಲ್ಯಾಂಡ್ ನಿಂದ ಪ್ರಯಾಣಿಕರು ಪರದಾಟ ನಡೆಸುವಂತಾಯಿತು. ಅರ್ಧಗಂಟೆಯಲ್ಲಿ ಪುನ: ಮಂಗಳೂರಿಗೆ ತೆರಳುವುದೆಂದು ಸಿಬ್ಬಂದಿಗಳು ಪ್ರಯಾಣಿಕರನ್ನು ವಿಮಾನದಲ್ಲಿ ಕುಳ್ಳಿರಿಸಿದ್ದರು. ಆದರೆ ಮುಂಜಾನೆಯಾದರೂ ಮಂಗಳೂರಿಗೆ ಪ್ರಯಾಣ ಬೆಳಸದೇ ಪ್ರಯಾಣಿಕರು ಸಂಕಷ್ಟ ಅನುಭವಿಸಿದರು. ರಾತ್ರಿಯಿಡೀ ಊಟ ನಿದ್ದೆಯಿಲ್ಲದೇ ಪ್ರಯಾಣಿಕರು ಕೊಚ್ಚಿ ವಿಮಾನ ನಿಲ್ದಾಣದಲ್ಲಿ ಸಮಯ ಕಳೆಯಬೇಕಾದ ಪರಿಸ್ಥಿತಿ ಎದುರಾಗಿತ್ತು. ಇಂದು ಮತ್ತೆ ಕೊಚ್ಚಿಯಿಂದ ಮಂಗಳೂರಿಗೆ ವಿಮಾನ ಬಂದಿದ್ದು, ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದಾರೆ.