ಬಂಟ್ವಾಳ: ಮನೆಗೆ ಸಿಡಿಲು ಬಡಿದು ತಾಯಿ ಮಗು ಗಾಯಗೊಂಡ ಘಟನೆ ಬಂಟ್ವಾಳ ತಾಲೂಕಿನ ಕಾವಳಪಡೂರು ಎಂಬಲ್ಲಿ ನಡೆದಿದೆ.
ಕಾವಳಪಡೂರು ಗ್ರಾಮದ ಬರ್ಕಟ್ಟೆ ನಿವಾಸಿ ವಿಜಯ ಅವರ ಪತ್ನಿ ಗೀತಾ(29) ಹಾಗೂ ಅವರ ಹತ್ತು ವರ್ಷದ ಮಗಳು ರಶ್ಮಿಕಾ ಅವರು ಸಿಡಿಲಿನ ಶಾಕ್ ಹೊಡೆದು ಸುಟ್ಟ ಗಾಯವುಂಟಾಗಿದೆ.
ಸಿಡಿಲಿನ ಶಾಕ್ ನಿಂದ ಸುಟ್ಟ ಗಾಯಗಳಾಗಿರುವ ತಾಯಿ ಮಗಳು ಬಂಟ್ವಾಳ ಸರಕಾರಿ ಆಸ್ಪತ್ರೆ ಯಲ್ಲಿ ದಾಖಲಾಗಿದ್ದಾರೆ.
*ಮಳೆ ಹಾನಿಗೆ ಲಕ್ಷಾಂತರ ರೂ ನಷ್ಟ*
ಆದಿತ್ಯವಾರ ಸುರಿದ ಗಾಳಿ ಮಳೆಗೆ ತಾಲೂಕಿನ ಅನೇಕ ಮನೆಗಳಿಗೆ ಹಾನಿಯಾಗಿದ್ದು ಲಕ್ಷಾಂತರ ರೂ ನಷ್ಟ ಸಂಭವಿಸಿದೆ. ತಾಲೂಕಿನ 8 ಮನೆಗಳಿಗೆ ತೀವ್ರ ಹಾನಿಯಾಗಿದ್ದು, 18 ಮನೆಗಳಿಗೆ ಭಾಗಶಃ ಹಾನಿಯಾಗಿದೆ.
ಒಂದು ದನದ ಕೊಟ್ಟಿಗೆ ಹಾನಿಯಾಗಿದ್ದು, 4 ತೋಟಗಾರಿಕಾ ಬೆಲೆಗಳಿಗೆ ಹಾನಿಯಾಗಿದ್ದು ಒಟ್ಟು 11.60 ಸಾವಿರ ರೂ ನಷ್ಟ ಸಂಭವಿಸಿದೆ ಎಂದು ಕಂದಾಯ ಇಲಾಖಾ ಅಧಿಕಾರಿಗಳು ತಿಳಿಸಿದ್ದಾರೆ.
ಆದಿತ್ಯವಾರ ರಾತ್ರಿ ಸುರಿದ ಬಾರೀ ಸಿಡಿಲು ಗಾಳಿ ಮಳೆಗೆ ತಾಲೂಕಿನ ಹಲವೆಡೆ ಮರಗಳು ಉರುಳಿ ಬಿದ್ದು ವಿದ್ಯುತ್ ಕಂಬಗಳಿಗೆ ಹಾನಿಯಾಗಿದ್ದು ಲಕ್ಷಾಂತರ ರೂ ನಷ್ಟ ಸಂಭವಿಸಿದೆ.
ತಾಲೂಕಿನ ವಿವಿಧ ಕಡೆಗಳಲ್ಲಿ ಒಟ್ಟು 60 ವಿದ್ಯುತ್ ಕಂಬಗಳು ಉರುಳಿ ಬಿದ್ದಿದೆ. ಬಂಟ್ವಾಳದ ಮೂಡುಬಿದಿರೆ ರಸ್ತೆಯಲ್ಲಿ ಸುಮಾರು 10 ಕಂಬಗಳು ರಸ್ತೆಗೆ ಉರುಳಿ ಬಿದ್ದು ಬೆಳಿಗ್ಗೆ ಯಿಂದ ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು.
ಬಂಟ್ವಾಳ ದಿಂದ ಮೂಡುಬಿದಿರೆ ಹೋಗುವವರು ಬೈಪಾಸ್ ನಿತ್ಯಾನಂದ ಭಜನಾ ಮಂದಿರದ ರಸ್ತೆಯಲ್ಲಿ ಹಾದುಹೋಗಿ ಎಸ್.ವಿ.ಎಸ್.ಕಾಲೇಜು ಬಳಿಯ ರಸ್ತೆಯಲ್ಲಿ ಮೂಡುಬಿದಿರೆ ರಸ್ತೆಗೆ ಸೇರುತ್ತಿದ್ದರು.
ಸಂಜೆಯ ವೇಳೆಗೆ ಕಾಮಗಾರಿ ಪೂರ್ಣಗೊಂಡ ಬಳಿಕ ರಸ್ತೆ ಸಂಚಾರಕ್ಕೆ ಅವಕಾಶ ನೀಡಲಾಗಿದೆ.
*ನಾಳೆ ಕಾಮಗಾರಿ ಪೂರ್ಣ*
ಗಾಳಿ ಮಳೆಗೆ ತಾಲೂಕಿನ ಸುಮಾರು 60 ವಿದ್ಯುತ್ ಕಂಬಗಳು ಕಡಿದು ಬಿದ್ದ ಹಿನ್ನೆಲೆಯಲ್ಲಿ ಸುಮಾರು 60 ಲಕ್ಷ ರೂ ಮೆಸ್ಕಾಂ ಇಲಾಖೆಗೆ ನಷ್ಟ ಸಂಭವಿಸಿದೆ.
ಆದಿತ್ಯವಾರ ರಾತ್ರಿಯಿಂದಲೇ ಮೆಸ್ಕಾಂ ಇಲಾಖೆಯ ಸಿಬ್ಬಂದಿಗಳು ಅವಿರತವಾಗಿ ಕೆಲಸದಲ್ಲಿ ತೊಡಗಿ ಸೋಮವಾರ ರಾತ್ರಿ ವೇಳೆ ಎಚ್.ಟಿ.ಲೈನ್ ನ ಕೆಲಸ ಪೂರ್ಣಗೊಳಿಸುತ್ತಾರೆ.
ಉಳಿದಂತೆ ಎಲ್.ಟಿ.ಲೈನ್ ಕೆಲಸ ಅಲ್ಪ ಸ್ವಲ್ಪ ಬಾಕಿಯಾದರೂ ಮಂಗಳವಾರ ಪೂರ್ಣಗೊಳ್ಳುತ್ತದೆ ಎಂದು ಮೆಸ್ಕಾಂ ಕಾರ್ಯ ನಿರ್ವಾಹಕ ಇಂಜಿನಿಯರ್ ರಾಮಚಂದ್ರ ಅವರು ತಿಳಿಸಿದ್ದಾರೆ.