ಬಹುಷಃ , ತಂದೆ ತಾಯಿಯ ಕಂಗಳಿಗೆ ಮಕ್ಕಳು ಎದೆ ಎತ್ತರಕ್ಕೆ ಬೆಳೆದರೂ ಅವರಿನ್ನೂ ಚಿಕ್ಕವರೆ. ಆದರೆ ಮಕ್ಕಳು ದೊಡ್ಡವರಾಗಿದ್ದಾರೆ ಎಂದು ತಿಳಿಯುವ ಸಂದರ್ಭ ಬಂದಾಗ ಪರಿಸ್ಥಿತಿ ಕೈ ಮೀರಿ ಹೋಗಿರುತ್ತದೆ.
ನನ್ನ ಮಗ/ಮಗಳು ಹಾಗೆ ಮಾಡಲು ಸಾಧ್ಯವೇ ಇಲ್ಲ,ಅವನು/ಳು ಅಂಥವನು/ಅಂಥವಳು ಅಲ್ಲವೇ ಅಲ್ಲ.ಇದು ಪ್ರತೀಯೊಬ್ಬ ತಂದೆತಾಯಿಯ ಅತಿಯಾದ ನಂಬಿಕೆಯ ಮಾತುಗಳು.ಆದರೆ ಎಷ್ಟು ಮಕ್ಕಳು ಈ ನಂಬಿಕೆಯನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಾರೆ?
ಹದಿಹರೆಯಕ್ಕೆ ಕಾಲಿಟ್ಟಾಗ ರಂಗು ರಂಗಿನ ಕನಸುಗಳ ಪ್ರಪಂಚ ತೆರೆದುಕೊಳ್ಳುವುದು ಸಹಜ.ಆ ಕನಸುಗಳು ಸಕಾರಾತ್ಮಕವಾಗಿ ಮುಂದುವರಿದು ನನಸಾದರೆ ಸರಿ,ಕೆಲವೊಮ್ಮೆ ಹರೆಯದ ಭ್ರಾಮಕ ಪ್ರಪಂಚ ಪ್ರಾಣಕ್ಕೇ ಕುತ್ತು ತರುವುದು ನಿಜ.
ಇಂದಿನ ಕಾಲದಲ್ಲಿ ಮೊಬೈಲ್ ಅನ್ನೋದು ನಮ್ಮ ಉಸಿರಾಟದಷ್ಟೇ ಅವಶ್ಯ ಅನ್ನೋ ಪರಿಸ್ಥಿತಿ ಇರುವುದು ಸತ್ಯ.ಆನ್ಲೈನ್ ಕ್ಲಾಸ್ ಎಂದೋ,ಅಥವಾ ನಮ್ಮ ಸ್ಟೇಟಸ್ಸನ್ನು ತೋರ್ಪಡಿಸಲೆಂದೋ ಹೈಸ್ಕೂಲ್ ಮಕ್ಕಳ ಕೈಯಲ್ಲೇ ಪೋಷಕರು ಮೊಬೈಲ್ ಇಟ್ಟು ಬಿಡುತ್ತಾರೆ.ಅದರಲ್ಲಿ ಬೇಕಾದುದು,ಬೇಡವಾದುದು ಎಲ್ಲವೂ ಇದೆ.ಬೇಕಾದುದನ್ನಷ್ಟೇ ಉಪಯೋಗಿಸಿಕೊಂಡಿದ್ದಿದ್ದರೆ ನಮ್ ಮಕ್ಕಳ ಭವಿಷ್ಯ ಹೂವು ಅರಳಿದಷ್ಟೇ ಚೆಂದವಾಗುವುದು ನಿಜ.ಆದರೆ ವಯೋಸಹಜ ಕುತೂಹಲಕ್ಕೆ ಬಲಿಬಿದ್ದು ಅಂತರ್ಜಾಲದ ಕಪಿಮುಷ್ಠಿಗೆ ಸಿಲುಕಿ ಅದೆಷ್ಟೋ ಜೀವಗಳು ಅರಳುವ ಮುನ್ನವೇ ಕಮರಿಹೋಗುತ್ತದೆ. ಇಲ್ಲಿ ತಪ್ಪು ಪೋಷಕರಾದ ನಮ್ಮದೇ ಅಲ್ಲವೆ?
ವಾಟ್ಸಪ್ಪಿನಲ್ಲಿ ಫೇಸ್ಬುಕ್ಕಿನಲ್ಲಿ ಹಾಯ್ ಬಾಯ್ ನಿಂದ ಆರಂಭವಾದದ್ದು ಕೊನೆಗೆ ಅವನಿಲ್ಲದೆ/ಅವಳಿಲ್ಲದೆ ಬದುಕಲಾರೆ ಎಂಬ ಬಾಲಿಶವಾದ ಮನಸ್ಥಿತಿ ಸಾವಿನಂಚಿಗೆ ಬಂದು ನಿಲ್ಲಲು ನಾವೇ ಕಾರಣರಾಗುತ್ತೇವೆ.
ಮಕ್ಕಳ ಮೇಲಿನ ಅತಿಯಾದ ಪ್ರೀತಿ ನಂಬಿಕೆಗಳು ಅವರ ಪ್ರಾಣಕ್ಕೆ ಕುತ್ತು ತರದಿರಲಿ. ನಾವು ಕಲಿಸುವ ಉತ್ತಮ ಸಂಸ್ಕೃತಿ,ಆಚಾರವಿಚಾರ ಗಳು ಅವರ ಬದುಕಿಗೆ ಭವ್ಯ ತಳಪಾಯವಾಗಲಿ,ಅಲ್ಲವೇ?
*ಪ್ರಮೀಳಾ ರಾಜ್*
ಶಿಕ್ಷಕಿ, ಸುಳ್ಯ, ದಕ್ಷಿಣ ಕನ್ನಡ.