ಲೇಖಕರು: ರಮೇಶ ಎಂ ಬಾಯಾರು, ಎಂ.ಎ, ಬಿ.ಎಡ್
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು

ಗುರಿಯೆನ್ನುವುದು ವ್ಯಕ್ತಿಯ ಬೆಳವಣಿಗೆಗೆ ಆಧಾರ ಸ್ಥಂಭ. ಗೊತ್ತುಗುರಿಯಿಲ್ಲದ ವ್ಯಕ್ತಿಯ ಬದುಕು ನಿಸ್ಸಾರದಾಯಕವಾಗುವ ಸಾಧ್ಯತೆಗಳೇ ಅಧಿಕ. ತಮ್ಮ ಮಕ್ಕಳ ಬಗ್ಗೆ ತಂದೆ, ತಾಯಿ, ಮತ್ತು ಪೋಷಕರು ಭಾರೀ ನಿರೀಕ್ಷೆಗಳನ್ನು ಇಟ್ಟುಕೊಂಡಿರುವರೆಂದು ಹೇಳುತ್ತೇವೆ. ಅವರ ನಿರೀಕ್ಷೆಗಳು ಮಕ್ಕಳ ಗುರಿಯಾಗಬಹುದೇ ಎಂಬ ಜಿಜ್ಞಾಸೆ ಇದೆ. ಅವರಲ್ಲಿ ನಿರೀಕ್ಷೆ ಅಥವಾ ಅಪೇಕ್ಷೆಗಳಿರುವುದು ತಪ್ಪಲ್ಲ. ಇತರೆಲ್ಲರ ಗುರಿಗಳನ್ನು ಈಡೇರಿಸುವ ವಿಚಾರದಲ್ಲಿಯೇ ನಮ್ಮ ಮಕ್ಕಳು ತಲೆ ಕೆಡಿಸುತ್ತಿರಬೇಕೆ ಅಥವಾ ಅವರಿಗೆ ಅವರದೇ ಆದ ಗುರಿಗಳನ್ನಿರಿಸಿ ಯಶಶ್ಸು ಕಾಣಲು ಸಾಧ್ಯವಿಲ್ಲವೇ? ನಮ್ಮ ಮಕ್ಕಳು ಡಾಕ್ಟರ್‌ರೇ ಆಗಬೇಕು, ಇಂಜಿನಿಯರ್‌ರೇ ಆಗಬೇಕು ಎಂಬ ಹೆತ್ತವರ ಯಾ ಶಿಕ್ಷಕರ ಗುರಿಗಳಿಗಿಂತ ಭಿನ್ನವಾಗಿ ನಮ್ಮ ಮಕ್ಕಳು ಏಕೆ ಯೋಚಿಸಬಾರದು? ಅವರಿಗೆ ಅವರದೇ ಆದ ಗುರಿಯನ್ನು ನಿರ್ದಿಷ್ಟಪಡಿಸಲು ಮತ್ತು ಆ ದಿಸೆಯಲ್ಲಿ ಸಾಗಲು ಸಾಮರ್ಥ್ಯವಿದೆಯಲ್ಲವೇ? ಶ್ರೇಷ್ಠ ಕೃಷಿ ಪಂಡಿತನೋ, ಮಹಾನ್ ವಿಜ್ಞಾನಿಯೋ, ಸತ್‌ಚಿಂತನೆಯ ಸಮಾಜಸೇವಕನೋ, ಬೃಹತ್ ಉದ್ಯಮಿಯೋ, ಆದರ್ಶ ಶಿಕ್ಷಕನೋ ಅಥವಾ ಇನ್ನೇನೇನೋ ಉನ್ನತ ಆಶಯದ ಗುರಿಗಳನ್ನು ನಮ್ಮ ಮಕ್ಕಳು ಏಕೆ ಹೊಂದ ಬಾರದು? ಸ್ವಂತ ವೈಚಾರಿಕತೆಯಡಿಯಲ್ಲಿ ನಿರ್ದಿಷ್ಟಪಡಿಸುವ ಗುರಿ ಯಶಶ್ಸನ್ನು ಗಳಿಸುವುದು ಖಚಿತವೇ ಆಗಿರುತ್ತದೆ.

ಕಡಲತಡಿಯ ಭಾರ್ಗವ ಡಾ. ಕೋಟ ಶಿವರಾಮ ಕಾರಂತರು ಹೇಳುವ ಮಾತು, ನೀನು ಹತ್ತು ಜನ ನಡೆವ ದಾರಿಯಲ್ಲಿ ನಡೆದರೆ, ಆ ದಾರಿಗೆ ನೀನು ಹನ್ನೊಂದನೇಯವನಾಗುತ್ತಿಯೇ ಹೊರತು ಮೊದಲಿಗನಾಗುವುದಿಲ್ಲ; ಯಾವುದೇ ಪಥದಲ್ಲಿ ಮೊದಲ ಸಾಧಕ ನೀನಾಗಬೇಕಾದರೆ ನೀನು ನಿನ್ನದೇ ಆಗಿರುವ ಹೊಸ ದಾರಿಯಲ್ಲೇ ಸಾಗಬೇಕು. ಅದಕ್ಕಾಗಿ ನೀನು ನಿನ್ನದೇ ಆದ ದಾರಿಯನ್ನು ಯೋಚಿಸು. ಅದೇ ದಾರಿಯಲ್ಲಿ ಮುನ್ನುಗ್ಗುವ ಶತಪ್ರಯತ್ನ ಮಾಡು. ಹೊಸ ದಾರಿಯಲ್ಲಿ ಕಲ್ಲು ಮುಳ್ಳು, ಪೊದರು, ಕ್ರಿಮಿ ಕೀಟ, ಹುಳ ಹುಪ್ಪಡಿ, ಹಾವು, ಹಲ್ಲಿ, ಚೇಳು ಎಲ್ಲವೂ ಇರಬಹುದು. ಎಲ್ಲರೂ ನಡೆದ ದಾರಿ ಸಾಗಲು ಸುಲಭ, ಆದರೆ ಸಾಧನೆಯ ಕಿರೀಟ ಒದಗಿಸಲಾರದು. ಗುರಿ ತಲುಪಿದ ಮತ್ತು ಯಶಶ್ಸುಗಳಿಸಿದ ತೃಪ್ತಿಯನ್ನು ನಿನ್ನ ದಾರಿಯೊಂದೇ ನಿನಗೆ ನೀಡಬಲ್ಲುದು. ಇದು ಯೋಚಿಸಲೇ ಬೇಕಾದ ಮಾತಲ್ಲವೇ? ಅಕ್ಷರಶಃ ದಿಟವಾದ ಮತ್ತು ದಿಟ್ಟವಾದ ಹಾಗೂ ಅನಸರಣೆಗೆ ಯೋಗ್ಯವಾದ ಮಾತಿದು ಎಂದು ಅನ್ನಿಸುವುದಲ್ಲವೇ?

ಗುರಿಯನ್ನು ಗೊತ್ತುಪಡಿಸುವ ಮೊದಲು ನಾವು ನಮ್ಮನ್ನು ಸರಿಯಾಗಿ ತಿಳಿದಿರಬೇಕು. ನಮ್ಮನ್ನು ಇತರರು ಖಂಡಿತವಾಗಿಯೂ ತಿಳಿದಿರಲು ಸಾಧ್ಯವೇ ಇಲ್ಲ. ತಿಳಿದಿದ್ದರೂ ಅದರ ನೈಜತೆ ಶೇಕಡಾ ಐವತ್ತರ ಒಳಗೆಯೇ ಇರುತ್ತದೆ. ಅಲ್ಲಮನ ವಚನವೊಂದು ಹೀಗೆ ಹೇಳುತ್ತದೆ.
ಹಿಂದಣ ಎಷ್ಟು ಪ್ರಳಯವಾಗಿಹುದೋ ನಾನರಿಯೆ,
ಮುಂದಣ ಎಷ್ಟು ಪ್ರಳಯವಾಗಲಿದೆಯೋ ನಾನರಿಯೆ;
ನನ್ನ ನಾ ಅರಿಯದೊಡೆ ಅದೇ ಪ್ರಳಯವಯ್ಯಾ.
ನಮಗೆ ನಮ್ಮನ್ನರಿಯುವ ತಾಳ್ಮೆ ಬೇಕು. ಶ್ರೀರಾಮ, ಏಸು, ಬುದ್ಧ, ಗಾಂಧಿ, ಮೋದಿ, ವಿವೇಕಾನಂದ, ಚೆನ್ನಮ್ಮ, ಕಲಾಂ ಇವರೆಲ್ಲರ ಬಗ್ಗೆಯೂ ನಮಗೆ ಗೊತ್ತು. ಆದರೆ ನಮಗೆ ನಮ್ಮ ಬಗ್ಗೆ ಅರಿವೇ ಇಲ್ಲದಿದ್ದರೆ ಹೇಗೆ? ನಮ್ಮ ಬಗ್ಗೆ ನಾವು ತಿಳಿದಿರಲೇ ಬೇಕು ಎಂದು ಹೇಳುವಾಗ ತಿಳಿದಿರಬೇಕಾದ ಮುಖ್ಯವಾದ ಅಂಶಗಳೇನು ಎಂಬುದೂ ನಮ್ಮ ಅರಿವಿನೊಳಗಿರಬೇಕು

ನಮ್ಮ ಗುರಿ ಸಾಧನೆಯಲ್ಲಿ ಪ್ರಧಾನ ಪಾತ್ರಧಾರಿಗಳು ನಮ್ಮ ಬಲಗಳು ಮತ್ತು ನಮ್ಮ ದೌರ್ಬಲ್ಯಗಳು. ನಾವು ನಮ್ಮ ಬಲಗಳನ್ನು ಮತ್ತು ದೌರ್ಬಲ್ಯಗಳನ್ನು ಗುರುತಿಸಿಕೊಳ್ಳಬೇಕು. ಈ ಬಲ ಮತ್ತು ದೌರ್ಬಲ್ಯಗಳು ಕಾಲ ಕಾಲಕ್ಕೆ, ನಾನಾ ಜನರ ಸಂಪರ್ಕಗಳು ಅಧಿಕವಾಗುತ್ತಿದ್ದಂತೆ ಮತ್ತು ನಮ್ಮ ಆರ್ಥಿಕತೆ ಉತ್ತಮಗೊಂಡತೆ ಬದಲಾವಣೆಗೊಳಗಾಗುತ್ತವೆ ಎಂಬುದು ಬಹಳ ಮುಖ್ಯವಾಗಿದೆ. ನಮ್ಮಲ್ಲಿ ಈಗಾಗಲೇ ಸ್ಥಾಪಿತಾವಾದ ದೌರ್ಬಲ್ಯಗಳನ್ನು ಸಂಪೂರ್ಣವಾಗಿ ನಾವು ನಮ್ಮಿಂದ ದೂರ ತಳ್ಳಬೇಕು. ಮುಂದೆ ಯಾವುದೇ ದೌರ್ಬಲ್ಯಗಳಿಗೆ ಒಳಗಾಗದಂತೆ ಜಾಗೃತರೂ ಆಗಿರಬೇಕು. ನಮ್ಮ ಬಲಗಳು ನಮ್ಮ ಸಾಧನೆಗೆ ಂಪೂರ್ಣವಾದ ಆಸರೆಗಳಾಗಿರುತ್ತವೆ. ಹೊಸ ಬಲಗಳು ಕೂಡಿಕೊಂಡಾಗ ಅವುಗಳನ್ನೂ ಅಗತ್ಯವೆನಿಸಿದಾಗ ಜೋಡಿಸಿಕೊಳ್ಳ ಬೇಕು. ಬಲಗಳನ್ನು ಬೆಳೆಸಿ ದೌರ್ಬಲ್ಯಗಳನ್ನು ಕಳಚುವ ಪ್ರಯತ್ನಗಳನ್ನು ನಾವು ಮಾಡಿದ್ದೇವೆಯೇ? ಇನ್ನಾದರೂ ದುರ್ಬಲರಾಗದಿರಲು ಪ್ರಯತ್ನ ಮಾಡೋಣ.
ಮರ ಉರುಳಿ ಬೀಳದೇ ಇರಲು ಬೇರು ಕಾರಣ. ಮರ ದಿನದಿಂದ ದಿನಕ್ಕೆ ಬಲಶಾಲಿಯಾಗುತ್ತಾ ಹೋಗುತ್ತದೆ. ಕಾರಣ ಬೇರಿನ ಆಸರೆ. ಕಣ್ಣಿಗೆ ಕಾಣದ ಬೇರು ಮರಕ್ಕೆ ಆಧಾರ. ಬೇರಿಗೆ ರೋಗ ಬಂದರೆ, ಕ್ರಿಮಿ ಕೀಟ ಅಥವಾ ಗೆದ್ದಲು ಆಕ್ರಮಿಸಿದರೆ ಮರವು ವಿನಾಶವಾಗುತ್ತದೆ. ನಮ್ಮ ದೇಹವನ್ನು ಮರಕ್ಕೆ ಹೋಲಿಸುವುದಾದರೆ ನಮ್ಮ ಬೇರೆಲ್ಲಿದೆ? ಮನಸ್ಸೇ ನಮ್ಮ ಬೇರು. ಮರದ ಬೇರಿನಂತೆ ಕಣ್ಣಿಗೆ ಕಾಣಿಸದೆ ಮನಸ್ಸು ನಮ್ಮನ್ನು ನಿಯಂತ್ರಿಸುತ್ತದೆ. ಈ ಮನಸ್ಸೆಂಬ ಬೇರು ರೋಗರಹಿತ, ಹಾವಳಿರಹಿತ ಆದಾಗ ನಮ್ಮ ಗುರಿ ಸಾಧನೆ ಸುಲಭ. ಮೊಬೈಲ್, ವಾಟ್ಸಾಪ್, ಫೇಸ್‌ಬುಕ್, ಮನರಂಜನೆಗಳು, ಆಟ, ಟಿ.ವಿ, ನಾಟಕ, ಜಾತ್ರೆ, ಸಮಾರಂಭಗಳು, ದುಶ್ಚಟಗಳು, ಹರಟೆ, ಹಿತ್ತಾಳೆ ಕಿವಿ, ಇತರರನ್ನೇ ಅವಲಂಬಿಸುವುದು, ಸ್ವಂತಿಕೆ ಇಲ್ಲದೇ ಇರುವುದು, ನಮ್ಮೊಳಗಿನ ದಿಗಿಲು(ಟೆನ್ಷನ್) ಇವೆಲ್ಲವೂ ನಮ್ಮ ಮನಸ್ಸನ್ನು ಹಾಳುಗೆಡಹುವ ಅಸಂಖ್ಯ ಶತ್ರು ಸರಣಿಗೆ ಸೇರಿವೆ.
ನಾವು ನಮ್ಮನ್ನೇ ಜಯಿಸಬೇಕು, ಇತರರನ್ನಲ್ಲ, ನಮ್ಮನ್ನು ಎಂದರೆ ನಮ್ಮಲ್ಲಿರಬಹುದಾದ ಆರು ಶತ್ರುಗಳನ್ನು ನಾವು ಜಯಿಸಿದರೆ, ಗುರಿ ತಲುಪಲು ಸುಲಭ ಗವಾಕ್ಷಿಯೊಂದು ನಮಗೆ ಸಿಕ್ಕಿಯೇ ಸಿಗುತ್ತದೆ. ಜೊತೆಗೆ ಸಾಧಿಸುವ ಹಂಬಲಗಳಿರಬೇಕು, ಸಾಧಿಸುವ ಛಲ ನಮ್ಮಲ್ಲಿರಬೇಕು. ದೃಢವಾದ ನಿರ್ಧಾರದ ಬೆಂಬಲ ರೂಢಿಸಬೇಕು. ಗಾಡಿಯ ನಾಲ್ಕು ಗಾಲಿಗಳಂತೆ ನಮ್ಮ ಜೀವನದಲ್ಲಿ ಪ್ರಮುಖವಾಗಿ ನಾಲ್ಕು ಹಂತಗಳಿವೆ. 1. Personal Life 2. Family Life 3. Professional Life  4.  Social Life: ಈ ನಾಲ್ಕೂ ಹಂತಗಳಿಗೆ ನಾವು ಸೌಂದರ್ಯ ನೀಡಬೇಕು. ಆಗ ನಮ್ಮ ಬದುಕು ಸುಂದರವಾಗುತ್ತದೆ, ವಿಜಯಶಾಲಿಯಾಗುತ್ತದೆ.
ಆಗದು ಆಗದು ಎಂದು ಕೈಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದು ಎಂಬುದು ಕವಿವಾಣಿ ಮಾತ್ರವಲ್ಲ, ಸವಿವಾಣಿ ಮತ್ತು ಸರಿಯಾದ ವಾಣಿಯೇ ಆಗಿದೆ. ಗುರಿ ಸಾಧನೆಯು ಕೈಕಟ್ಟಿ ಕೂರುವ ಸೋಮಾರಿಯ ಸೊತ್ತಲ್ಲ. ಅದು ಸಾಧಕನ ಸೊತ್ತು. ಸಾಧನೆಗಾಗಿ ನಮ್ಮ ಶ್ರಮ ನಿರಂತರವಿರಬೇಕು. ನಾವು ಆಲಸ್ಯರಹಿತರೂ ಪ್ರಯತ್ನಶೀಲರೂ ಚೈತನ್ಯ ಶಾಲಿಗಳೂ ಆಗಬೇಕು. ಪ್ರತಿಯೊಬ್ಬನೂ ನಿಶ್ಚಲ ಸ್ಥಿತಿಯಿಂದ ಚಲನ ಸ್ಥಿತಿಗೆ ಬರಬೇಕು. ಸಮಾನ ದೇಹಶಕ್ತಿ ಹಾಗೂ ಸಮಾನ ಬುದ್ಧಿಶಕ್ತಿ ಎಲ್ಲರಿಗೂ ಇದೆ. ಎಲ್ಲರ ಕೈಯಲ್ಲಿರುವ ಕತ್ತಿ ಒಂದೇ ರೀತಿಯಾದ ಹರಿತವನ್ನು ಹೊಂದಿರುವುದಿಲ್ಲ. ಕತ್ತಿಯ ಹರಿತವು ಮಸೆತ, ಬಳಕೆ ಮತ್ತು ಕಾಪಿಡುವಿಕೆಗಳನ್ನು ಆಧರಿಸಿದೆ, ನಿತ್ಯ ಮಸೆಯುತ್ತಾ ಬಳಸುವ ಕತ್ತಿ ಸದಾ ಹರಿತವಾಗಿಯೇ ಇರುತ್ತದೆ. ಅದೇ ರೀತಿ ನಮ್ಮನ್ನು ನಾವು ಸೂಕ್ತವಾಗಿ ಬಳಸಬೇಕು, ಸಮರ್ಪಕವಾಗಿ ಮಸೆಯುತ್ತಾ ಸಂಸ್ಕರಣೆಗೊಳಗಾಗುತ್ತಾ ಬೆಳೆಯುತ್ತಿರಬೇಕು. ಎಲ್ಲಾ ಅಸಾಧ್ಯತೆಗಳಿಂದ, ದೋಷಪೂರಿತ ಪ್ರೇರಕಗಳಿಂದ ನಾವು ನಮ್ಮನ್ನು ಕಾಪಿಡಬೇಕು. ಬೆಳೆದು ಬೆಳಗಲು ನಮ್ಮ ಗೊತ್ತು ಗುರಿಗಳೇ ಆಧಾರ.

 

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here