ಲೇ: ರಮೇಶ ಎಂ ಬಾಯಾರು ಎಂ.ಎ; ಬಿ.ಎಡ್
ರಾಜ್ಯ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕರು.

ಮುತ್ತಿನಂತಹ ಮಾತು, ಮುಗ್ಧ ಮಾತು ಇವು ಜನಮನ್ನಿತ, ಸರ್ವರಿಂದಲೂ ಅಪೇಕ್ಷಣೀಯವಾದುದು ಎಂಬುದು ಸಂದೇಹಾತೀತ. ಆದರೆ ಮತ್ತಿನ ಮಾತು, ಪಿಸುಮಾತುಗಳಿಗೆ ಯಾರೂ ಮನ್ನಣೆ ಕೊಡುವುದಿಲ್ಲ. ತೀಕ್ಷ್ಣತರವಾದ ಹರಿತ-ದುರಿತಗಳಿಗೆ ಮತ್ತಿನ ಮಾತು ಮತ್ತು ಪಿಸು ಮಾತುಗಳು ಕಾರಣಗಳಾಗುತ್ತವೆ. ಆದುದರಿಂದಲೇ ಇಂತಹ ಮಾತುಗಳನ್ನು ಜನ ನಿರ್ಲಕ್ಷಿಸುತ್ತಾರೆ ಮತ್ತು ಅಗೌರವಿಸುತ್ತಾರೆ. ಪಿಸು ಮಾತು ಹೇಗೆ ದುರಿತಕಾರಿ ಮತ್ತು ಆತಂಕಕಾರಿ ಎಂಬುದನ್ನು ಎಲ್ಲರೂ ಬಲ್ಲರು.
ಕಿವಿ ಮಾತು ಮತ್ತು ಪಿಸುಮಾತು ಸಮಾನಾರ್ಥಕವಲ್ಲವೇ? ಎಂಬ ಸಂದೇಹ ಕೆಲವರಲ್ಲಿ ಇದೆ. ಕಿವಿ ಮಾತು ಎಂದರೆ ಅದು ಸಲಹೆಯೇ ಹೊರತು ಅಪಾಯಕಾರಿಯಲ್ಲ. ಹಾಗೆಂದು ಎಲ್ಲ ಸಂದರ್ಭಗಳಲ್ಲೂ ಕಿವಿಮಾತು ಆಪ್ತವಾಗಿರುತ್ತದೆ ಎನ್ನಲಾಗದು. ಯಾವುದೋ ಸಂಚಿನ ಉದ್ದೇಶದಿಂದ ನೀಡುವ ಕಿವಿ ಮಾತುಗಳನ್ನು ಆಲಿಸಿ ತನ್ನ ಆಪ್ತರನ್ನು ಕಳೆದುಕೊಂಡ ಅನೇಕ ಜನರಿದ್ದಾರೆ. ಕಿವಿಮಾತುಗಳಿಗೆ ನಾವು ಕಿವಿಯಾಗಬೇಕು, ಆದರೆ ಅನುಷ್ಠಾನಪೂರ್ವದಲ್ಲಿ ಅವುಗಳನ್ನು ವಿಮರ್ಶೆಗೊಳಪಡಿಸುವುದು ಸೂಕ್ತ ಮತ್ತು ಅನಿವಾರ್ಯ ಎಂಬ ಎಚ್ಚರಿಕೆ ಪ್ರತಿಯೊಬ್ಬರಲ್ಲೂ ಬೇಕು.
ಪಿಸು ಮಾತುಗಳನ್ನು ಹೆಚ್ಚಾಗಿ ಕಿವಿಯ ಹತ್ತಿರಕ್ಕೆ ಬಂದೇ ಹೇಳುತ್ತಾರೆ. ಆದರೆ ಅವು ಕಿವಿ ಮಾತುಗಳಾಗಿರುವುದಿಲ್ಲ; ಎಂದರೆ ಅವು ಆಪ್ತ ಸಲಹೆಗಳಾಗಿರುವುದಿಲ್ಲ. ಯಾವುದೋ ಪತನದಂಚಿಗೆ ಸಾಗಿಸುವ ಒಂದು ಅನಪೇಕ್ಷಿತ ಬೆಳವಣಿಗೆಯ ಹುನ್ನಾರವೇ ಪಿಸು ಮಾತು. ನೇರ ನುಡಿಗಳಾಗಿದ್ದರೆ ಅದು ಇತರರಿಗೆ ಕೇಳಿಸಲೇ ಬಾರದು ಎಂಬ ಹಠವಿರಬಾರದಲ್ಲವೇ? ಪಿಸು ಮಾತನ್ನು ಇತರರು ಆಲಿಸಲೇ ಬಾರದು ಎಂಬ ನಿಯತ್ತು ಹೇಳುಗ ಮತ್ತು ಕೇಳುಗ ಇಬ್ಬರಲ್ಲೂ ಇರುತ್ತದೆ. ಸಾಮಾನ್ಯವಾಗಿ ಪಿಸು ಮಾತು ಬಾಯಿಯಿಂದ ಕೇವಲ ಧ್ವನಿಯ ಗಾಳಿಯನ್ನಷ್ಟೇ ಹೊರಡಿಸುತ್ತದೆ. ಧ್ವನಿ ಪೆಟ್ಟಿಗೆ ಸಂಪೂರ್ಣವಾಗಿ ಮುಚ್ಚಲ್ಪಟ್ಟಿರುತ್ತದೆ. ಇನ್ನು ಕೆಲವು ಪಿಸು ಮಾತುಗಳು ಸಣ್ಣ ಧ್ವನಿಯಲ್ಲಿರುತ್ತವೆ ಅದನ್ನೇ ನಾವು ಗುಸು ಗುಸು ಮಾತು ಎಂದೋ ಕುಣು ಕುಣು ಮಾತು ಎಂದೋ ಹೇಳುತ್ತೇವೆ. ಗುಸು ಗುಸು ಕೂಡಾ ಉಸುರಿದ ವ್ಯಕ್ತಿಯು ತನ್ನನ್ನು ಬಚ್ಚಿಡುವ ಕಾರಣದಿಂದಲೇ ಹೇಳುವ ಮಾತುಗಳು. ಅವು ನೈಜತೆಯೊಳಗೂ ಇರಬಹುದು, ಹೊರಗೂ ಇರಬಹುದು. ಆದರೆ ಹೇಳುಗ ತನ್ನನ್ನು ಗುಪ್ತವಾಗಿಡಲು ಕೇಳುಗನೊಂದಿಗೆ ಒಪ್ಪಂದ ಮಾಡಿರುತ್ತಾನೆ.
ಯಾವ ಮನೆಯೊಳಗೆ ಪಿಸು ಮಾತು ಆರಂಭಿಸಲ್ಪಡುತ್ತವೆಯೋ ಆ ಮನೆಯು ಛಿದ್ರವಾಗುವುದು ಖಚಿತ. ಯಾವುದೋ ಮನೆಯೊಳಗಿನ ಸಂಗತಿಯನ್ನು ವಿರೋಧಿಸುವ ಉದ್ದೇಶ ಹೊಂದಿದವರು ಪಿಸು ಮಾತುಗಳ ಮೂಲಕ ಸಂವಹನ ಮಾಡುವರು. ಈ ಪಿಸು ಮಾತು ಚಿಕ್ಕ ಸಮಸ್ಯೆಯೊಂದನ್ನು ಬೃಹದಾಕಾರಕ್ಕೆ ಬೆಳೆಸಿ ಮನೆಯ ಮನಗಳನ್ನು ಒಡೆಯಲು ಕಾರಣವಾಗುತ್ತದೆ. ಮನೆಯು ನೆಗೆದು ಬೀಳುತ್ತದೆ.
ಯಾರಾದರೂ ಪರಿಚಿತ ಪುರುಷ ಅಥವಾ ಮಹಿಳೆಯರು ಇಬ್ಬರ ಸಮೀಪದಲ್ಲೆ ದಾಟಿದಾಗ ಅವರ ಬಗ್ಗೆ ಆ ಇಬ್ಬರು ಪಿಸು ಮಾತು ಆರಂಭಿಸುತ್ತಾರೆ. ಆ ಪಿಸು ಮಾತಿನಲ್ಲಿ ಗುಣಗಾನವೂ ಇರಬಹುದು, ಅವಗಣನೆಯ ಸಂದೇಶಗಳೂ ಇರಬಹುದು. ಇವರು ಪಿಸು ಮಾತನಾಡುವುದನ್ನು ಸಮೀಪದಿಂದ ಹೋದವರು ಗಮನಿಸಿದರೆ ಪಿಸುಮಾತುಗರು ಗಪ್ ಚುಪ್ ಆಗುತ್ತಾರೆ ಮತ್ತು ಕಳ್ಳರಂತೆ ವರ್ತಿಸುತ್ತಾರೆ. ಇದರಿಂದಾಗಿ ಆತನ ಮನದೊಳಗೂ ಸಂಶಯದ ಅಲೆ ಎದ್ದೇ ಏಳುತ್ತದೆ. ಒಂದೊಮ್ಮೆ ಇದರಿಂದಾಗಿ ಹಗೆತನವು ಬೆಳೆಯಬಹುದು. ಇಂತಹ ಹಗೆತನಗಳು ಸಾಮಾಜಿಕ ಅಶಾಂತಿಗೂ ಕಾರಣವಾಗುತ್ತದೆ.
ಸಭಾ ವೇದಿಕೆಗಳಲ್ಲಿ ಬಹಳಷ್ಟು ಪಿಸು ಮಾತುಗಳ ವಿನಿಮಯವನ್ನು ಕಾಣುತ್ತೇವೆ. ಈ ಪಿಸುಮಾತುಗಳು ಯಾವುದೇ ದುರುದ್ದೇಶ ಪೂರಿತ ಆಗಿರುವುದಿಲ್ಲ. ಯಾಕೆಂದರೆ ಪಿಸು ಮಾತನಾಡಬಯಸುವವರು ತೆರೆಯ ಮರೆಯನ್ನೇ ಬಯಸುತ್ತಾರೆ. ವೇದಿಕೆಯ ಮೇಲೆ ಪಿಸು ಮಾತು ನಡೆದರೆ ಅದು ಸಭಾ ಮರ್ಯಾದೆ ಅನಿಸುವುದಿಲ್ಲ. ವೇದಿಕೆಯು ಶಿಸ್ತು ಮತ್ತು ಗೌರವ ವರ್ಧನೆಗೆ ಆದರ್ಶವಾಗಿರ ಬೇಕು. ಆಗ ಸಭೆಯಲ್ಲೂ ಶಿಸ್ತು ಇರಲು ಸಾಧ್ಯ. ಜನರಲ್ಲಿ ಶಿಸ್ತೆಂಬ ಸಾಮಾಜಿಕ ಮೌಲ್ಯವನ್ನು ಬೆಳೆಸಲು ಸಭಾ ವೇದಿಕೆಗಳೂ ಕಾರಣವಾಗಬೇಕು. ಪಿಸುಮಾತು ವೇದಿಕೆಯಲ್ಲೂ ಇರಬಾರದು. ಎಲ್ಲೂ ಇರಬಾರದು. ಪಿಸು ಮಾತುಗರು ತನ್ನ ವಿನಾಶದ ಹೊಂಡವನ್ನು ತಾವೇ ತೋಡಿದಂತೆ ಎಂಬ ಪ್ರಜ್ಞೆ ನಮ್ಮಲ್ಲಿರಲಿ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here