ವಿಟ್ಲ: ವಿಟ್ಲ ಬಳಿಯ ಸುರಿಬೈಲು ತಿರುವಿನಲ್ಲಿ ಅತಿ ವೇಗದಲ್ಲಿ ಹಾಗೂ ಅಜಾಗರೂಕತೆ ಚಾಲನೆ ಮಾಡಿದ ಪಿಕಪ್ ವಾಹನ ದ್ವಿಚಕ್ರವಾಹನಕ್ಕೆ ಡಿಕ್ಕಿಯಾಗಿ ಓರ್ವ ವ್ಯಕ್ತಿ ಸಾವನ್ನಪ್ಪಿ ಸಹಸವಾರ ಗಾಯಗೊಂಡಿದ್ದಾರೆ.
ತೊಕ್ಕೊಟ್ಟು ಮೂಲದ ದ್ವಿಚಕ್ರ ವಾಹನ ಸವಾರ ಸಂತೋಷ್ (35) ಮೃತ ಪಟ್ಟಿದ್ದಾರೆ. ಸಹ ಸವಾರ ರಂಜಿತ್ ಗಾಯಗೊಂಡಿದ್ದು ಅವರನ್ನು ಮಂಗಳೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಾಲೆತ್ತೂರು ಕಡೆಗೆ ಚಲಿಸುತ್ತಿದ್ದ ಪಿಕ್ ಅಪ್ ವಾಹನವನ್ನು ಚಾಲಕ ಅತಿ ವೇಗದಲ್ಲಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿದ್ದು ಈ ವೇಳೆ ಸಾಲೆತ್ತೂರು ಕಡೆಯಿಂದ ಕಲ್ಲಡ್ಕ ಕಡೆಗೆ ಹೋಗುತ್ತಿದ್ದ ಸ್ಕೂಟರ್‌ಗೆ ಡಿಕ್ಕಿ ಹೊಡೆದು, ಸವಾರರಿಬ್ಬರು ರಸ್ತೆಗೆ ಎಸೆಯಲ್ಪಟ್ಟು ಗಾಯಗೊಂಡಿದ್ದಾರೆ.
ಮೊದಲು ಇಬ್ಬರನ್ನೂ ಬಂಟ್ವಾಳದಲ್ಲಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಜಿಲ್ಲಾ ಸರ್ಕಾರಿ ವೆನ್‌ಲಾಕ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಸಂತೋಷ್ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ವಿಟ್ಲ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.