ಬಂಟ್ವಾಳ: ಸರಕಾರ ಹಾಗೂ ಸರಕಾರೇತರ ಕ್ಷೇತ್ರಗಳಲ್ಲಿ ನಮ್ಮ ಪ್ರತಿಭೆಗಳನ್ನು ಪ್ರದರ್ಶಿಸಲು ಸಾಕಷ್ಟು ಅವಕಾಶಗಳು ಇರುತ್ತವೆ. ಅವಕಾಶಗಳ ಮಾಹಿತಿಗಳನ್ನು ನಾವು ಸಂಗ್ರಹಿಸುವುದರೊಂದಿಗೆ ಸಿಕ್ಕಂತಹ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡು ನಮ್ಮ ಪ್ರತಿಭೆಯನ್ನು ಪ್ರದರ್ಶಿಸುವವರು ನಾವಾಗಬೇಕು ಎಂದು ಬಂಟ್ವಾಳ ಸರ್ಕಲ್ ಇನ್ಸ್ ಪೆಕ್ಟರ್ ಟಿ‌.ಡಿ ನಾಗರಾಜ್ ಅವರು ಅಭಿಪ್ರಾಯಪಟ್ಟಿದ್ದಾರೆ‌.

ಬಂಟ್ವಾಳ ತಾಲೂಕಿನ ಕಲ್ಲಡ್ಕದಲ್ಲಿರುವ ಅನುಗ್ರಹ ಕಾಲೇಜಿನಲ್ಲಿ ಪ್ರವಾದಿ ಮುಹಮ್ಮದ್(ಸ) ಮಾನವತೆಯ ಮಾರ್ಗದರ್ಶಕ ರಾಜ್ಯವ್ಯಾಪಿ ಸೀರತ್ ಅಭಿಯಾನದ ಪ್ರಯುಕ್ತ ದಕ್ಷಿಣ ಕನ್ನಡ, ಉಡುಪಿ ಹಾಗೂ ಕೊಡಗು ಜಿಲ್ಲೆಗಳ ಪತ್ರಕರ್ತರು, ವಕೀಲರು ಹಾಗೂ ಶಿಕ್ಷಕರಿಗೆ ಆಯೋಜಿಸಲಾಗಿದ್ದ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಿ ಹಾಗೂ ಮುಖ್ಯಮಂತ್ರಿಗಳ ಚಿನ್ನದ ಪದಕ ಪುರಸ್ಕೃತರಾದುದಕ್ಕೆ ಸನ್ಮಾನ ಸ್ವೀಕರಿಸಿದ ಬಳಿಕ ಮಾತನಾಡುತ್ತಿದ್ದರು.

ಸಮಾಜಕ್ಕೆ ಉತ್ತಮ ಸಂದೇಶಗಳನ್ನು ಸಾರುವ ಶಿಕ್ಷಕರು, ವಕೀಲರು ಹಾಗೂ ಪತ್ರಕರ್ತರಿಗಾಗಿ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಿರುವುದು ನಿಜವಾದ ಆಯ್ಕೆಯಾಗಿದೆ ಎಂದು ಹೇಳಿದ ಅವರು, ಎಲ್ಲ ಊರುಗಳಲ್ಲಿ 99 ಶೇಖಡಾ ಜನರು ಒಳ್ಳೆಯವರಾಗಿರುತ್ತಾರೆ‌‌.‌ ಕೇವಲ ಒಂದು ಶೇಕಡ ಜನರಿಂದ ಮಾತ್ರ ಕಿತಾಪತಿ ನಡೆಯುತ್ತದೆ. ಒಂದು ಶೇಕಡಾ ಜನರಿಂದ ನಡೆಯುವಂತ ಕಿತಾಪತಿಗಳಿಂದ ಇಡೀ ಊರಿನ ಹೆಸರು ಹಾಳಾಗುತ್ತಿದೆ. ಆದ್ದರಿಂದ ಅಂತಹವರನ್ನು ಮಟ್ಟಹಾಕಲು ಜನರ ಸಹಕಾರ ಪೊಲೀಸ್ ಇಲಾಖೆಗೆ ಅಗತ್ಯ ಎಂದು ಅವರು ಹೇಳಿದರು.

ಮುಖ್ಯಮಂತ್ರಿಗಳ ಚಿನ್ನದ ಪದಕ ಪಡೆದುದಕ್ಕೆ ಸನ್ಮಾನ ಸ್ವೀಕರಿಸಿದ್ದನ್ನು ಉಲ್ಲೇಖಿಸಿದ ಅವರು, ಮುಖ್ಯಮಂತ್ರಿಗಳ ಚಿನ್ನದ ಪದಕ ನನಗೆ ದೊರೆತಿರುವುದು ಕೇವಲ ನಿಮಿತ್ತ ಮಾತ್ರ. ಪೊಲೀಸ್ ಇಲಾಖೆಯ ಸೇವೆಯಲ್ಲಿ ನಾನು ಈವರೆಗೆ ಮಾಡಿದ ಎಲ್ಲಾ ಕೆಲಸಗಳ ಹಿಂದೆ ವಿವಿಧ ಪೊಲೀಸ್‌ ಠಾಣೆಯ ಸಿಬ್ಬಂದಿಗಳ ಸಂಪೂರ್ಣ ಸಹಕಾರವೂ ಇದಕ್ಕೆ ಸಹಕಾರಿಯಾಗಿದೆ ಎಂದು ಅವರು ಹೇಳಿದರು.

ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಮನಸ್ಸು ಮಾಡಬೇಕು. ಅಲ್ಲದೇ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಯುವಜನರನ್ನು ನಾವು ಸಿದ್ಧರನ್ನಾಗಿ ಮಾಡಬೇಕಿದೆ ಎಂದು ಈ ವೇಳೆ ಅವರು ಆಶಯ ವ್ಯಕ್ತಪಡಿಸಿದರು.

ಬಳಿಕ ಮಾತನಾಡಿದ ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್ ಎಂಪಿ, ಸರ್ಕಾರದ ಭಾಗವಾಗಬೇಕಾದರೆ ಕೆಪಿಎಸ್ಸಿ, ಐಎಎಸ್ ನಂತಹಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ನಾವು ಸಂಪೂರ್ಣ ತಯಾರಿ ನಡೆಸಬೇಕು. ಯಾವುದೇ ಕಠಿಣ ಪರಿಶ್ರಮ ಇಲ್ಲದೆ ಶ್ರೇಯಸ್ಸನ್ನು ಬಯಸುವುದು ಸರಿಯಲ್ಲ. ಆದ್ದರಿಂದ ಕಠಿಣ ಪರಿಶ್ರಮ ಮಾಡಿದರೆ ನಮಗೆ ಯಶಸ್ಸು ಖಂಡಿತ ಎಂದು ಹೇಳಿದರು.

ಬಂಟ್ವಾಳ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಹರೀಶ್ ಮಾಂಬಾಡಿ ಮಾತನಾಡಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕುಳಿತುಕೊಳ್ಳುವವರ ಸಂಖ್ಯೆ ಬಹಳಷ್ಟು ಕಡಿಮೆ ಎಂದರೆ ತಪ್ಪಲ್ಲ. ಇಲ್ಲಿನ ಜನರು ಕಂಪರ್ಟ್ ಝೋನ್ ಅನ್ನು ಬಯಸುತ್ತಾರೆ. ಇದೂ ಒಂದು ಕಾರಣವೂ ಇರಬಹುದು. ದಕ್ಷಿಣ ಕನ್ನಡದ ಯುವಜನರನ್ನು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರು ಮಾಡುವ ಜವಾಬ್ದಾರಿ ಎಲ್ಲಾ ಸಂಘ ಸಂಸ್ಥೆಗಳ ಮೇಲಿದೆ ಎಂದವರು ಈ ಸಂದರ್ಭದಲ್ಲಿ ಹೇಳಿದರು.

ಬಂಟ್ವಾಳ ತಾಲೂಕು ವಕೀಲರ ಸಂಘದ ಅಧ್ಯಕ್ಷ ದೀಪಕ್ ಕುಮಾರ್ ಜೈನ್ ಮಾತನಾಡಿ, ನ್ಯಾಯಾಂಗದ ಕ್ಷೇತ್ರದಲ್ಲಿ ಯುವಜನತೆ ಮುಂದೆ ಬರಬೇಕಾಗಿದೆ. ಆ ಮೂಲಕ ನ್ಯಾಯದ ಪರವಾಗಿ ಮಾತನಾಡುವ ಧೈರ್ಯ ನೀಡಬೇಕಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಅನುಗ್ರಹ ಕಾಲೇಜಿನ ಪ್ರಾಂಶುಪಾಲೆ ಗೀತಾ ಜಿ ಭಟ್ ಮಾತನಾಡಿದರು.

ವೇದಿಕೆಯಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ಮಹಿಳಾ ಸಂಚಾಲಕಿ ಸಮೀನಾ ಉಪ್ಪಿನಂಗಡಿ, ಇಲ್ಯಾಸ್ ಇಸ್ಮಾಯಿಲ್ ಉಪಸ್ಥಿತರಿದ್ದರು.

ಜಮಾಅತೆ-ಎ-ಇಸ್ಲಾಮಿ ಹಿಂದ್ ಮಂಗಳೂರು ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಇಸ್ಹಾಕ್ ಸಿ‌.ಎ. ಅಧ್ಯಕ್ಷ್ಯತೆ ವಹಿಸಿ ಮಾತನಾಡಿದರು.

ಜಮಾತೆ ಇಸ್ಲಾಮಿ ಹಿಂದ್ ಮಂಗಳೂರು ವಲಯ ಸಂಚಾಲಕ ಅಬ್ದುಸ್ಸಲಾಂ ಉಪ್ಪಿನಂಗಡಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸೀರತ್ ಅಭಿಯಾನದ ಪ್ರಯುಕ್ತ ಆಯೋಜಿಸಲಾಗಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿಜೇತರಿಗೆ ಪ್ರಥಮವಾಗಿ 15,000 ದ್ವಿತೀಯವಾಗಿ 10 ಸಾವಿರ ಹಾಗೂ ತೃತೀಯವಾಗಿ 5000 ಹಾಗೂ ಸಮಾಧಾನಕರ ಬಹುಮಾನಗಳನ್ನು ನೀಡಿ ಗೌರವಿಸಲಾಯಿತು‌.

ಕಾರ್ಯಕ್ರಮದಲ್ಲಿ ಮುಖ್ತಾರ್ ಬೋಳಂಗಡಿ, ಯಾಸಿನ್ ಬೇಗ್, ಹೈದರ್ ವಿಟ್ಲ, ಮುಬೀನ್ ಸುಳ್ಯ, ಇಮಾರತ್ ಅಲಿ, ಅಬ್ದುಲ್ಲ ಚೆಂಡಾಡಿ, ಮುನವ್ವರ್ ಕಂದಕ್, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಪ್ರಬಂಧ ಸ್ಪರ್ಧಾ ಸಮಿತಿಯ ಸಂಚಾಲಕ ಅಮೀನ್ ಅಹ್ಸನ್ ಧನ್ಯವಾದಗೈದರು.

ಅಮಾನುಲ್ಲಾ ಖಾನ್ ತರಿಕೆರೆ ನಿರೂಪಿಸಿದರು. ಅನುಗ್ರಹ ಕಾಲೇಜಿನ ವಿದ್ಯಾರ್ಥಿನಿಯರು ವಿದ್ಯಾರ್ಥಿನಿಯರಾದ ಮೈಮುನಾ ರಷ್ಮಾ ಹಾಗೂ ಹಸೀಬಾ ಬಾನು ಕಿರಾಅತ್ ಪಠಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here