ಬಂಟ್ವಾಳ, ಮಾ. ೧: ಕಳೆದ ಕೆಲವು ದಿನಗಳ ಹಿಂದೆ ಪೊಲೀಸರಿಬ್ಬರು ಪಂಜಿಕಲ್ಲು ಗರಡಿಯ ಬಳಿ ವಾಸವಾಗಿರುವ ವೃದ್ಧೆಯೊಬ್ಬರಿಗೆ ನೆರವು ನೀಡಿದ ವೀಡಿಯೋ ವೈರಲ್ ಆಗಿದ್ದು, ಇಂದು ಅದೇ ವೃದ್ಧಿಗೆ ವಾಮದಪದವು ಮಾವಿನಕಟ್ಟೆಯ ಮುಸ್ಲಿಂ ಉದ್ಯಮಿಯೊಬ್ಬರು ಚಪ್ಪಲು, ಬಟ್ಟೆ ಬರೆ ಸೇರಿದಂತೆ ಒಂದು ತಿಂಗಳ ದಿನಸಿ ಸಾಮಾಗ್ರಿಗಳನ್ನು ವಿತರಿಸಿ ಮಾನವೀಯತೆ ಮೆರೆದಿದ್ದಾರೆ.
ಪೊಲೀಸರಾದ ಕಾನ್ಸ್ಟೇಬಲ್ ವಿಜಯ್ ಹಾಗೂ ಚಾಲಕ ವಿಶ್ವನಾಥ ಪೆರಾಜೆ ಅವರು ಪಂಜಿಕಲ್ಲು ನಿವಾಸಿ ಜಿನ್ನು ಅವರಿಗೆ ನೆರವು ನೀಡಿದ್ದರು. ಇದೀಗ ವಿಶ್ವನಾಥ್ ಅವರ ಸ್ನೇಹಿತ ಬಿ.ಎಚ್.ಮೊಹಮ್ಮದ್ ರಫೀಕ್ ಅವರು ವೃದ್ಧೆಗೆ ನೆರವು ನೀಡಿದ್ದಾರೆ. ವಿಶ್ವನಾಥ ಪೆರಾಜೆ ಅವರು ತನ್ನ ವಾಟ್ಸಾಪ್‌ನಲ್ಲಿ ಹಾಕಿದ ಸ್ಟೇಟಸ್ ಕಂಡು ರಫೀಕ್ ಅವರ ನೆರವು ನೀಡಿರುವುದು ವಿಶೇಷವಾಗಿದೆ.
ಧರ್ಮವನ್ನು ಮೀರಿ ರಫೀಕ್ ಅವರು ನೆರವು ನೀಡಿದ್ದು, ತಾನು ಕೂಡ ಕಂಷ್ಟದಿAದಿದ್ದಾಗ ತನ್ನ ಊರಿನವರು ಧರ್ಮ ನೋಡದೆ ನೆರವು ನೀಡಿದ್ದಾರೆ. ಅವರ ನೆರವಿನ ಋಣವನ್ನು ಸಂದಾಯ ಮಾಡುವ ಕಾರ್ಯ ಮಾಡುತ್ತಿದ್ದೇನೆ. ನೆರವು ನೀಡುವ ವೇಳೆ ವಿಶ್ವನಾಥ್ ಅವರು ಕೂಡ ತನ್ನ ಜತೆ ಬಂದಿದ್ದು, ಅವರು ಪೋಟೊ ತೆಗೆದಿರುವುದು ಕೂಡ ನನಗೆ ಗೊತ್ತಿಲ್ಲ. ಪ್ರಚಾರದ ದೃಷ್ಟಿಯಿಂದ ಈ ಕಾರ್ಯ ಮಾಡಿಲ್ಲ ಎಂದು ರಫೀಕ್ ತಿಳಿಸಿದ್ದಾರೆ.