ಬಂಟ್ವಾಳ : ಹಿರಿಯ ಸದಸ್ಯರಿಗೆ ಪುರಸಭೆಯ ಇಂಜಿನಿಯರ್ ಹಾರಿಕೆಯ ಉತ್ತರ ನೀಡಿ ಅಗೌರವ ನೀಡಿದ್ದಾರೆ ಎಂದು ಆರೋಪಿಸಿ,ವಿಪಕ್ಷ ಬಿಜೆಪಿ ಸದಸ್ಯರು ಸಭಾತ್ಯಾಗ ನಡೆಸಿದ ಘಟನೆ ಸೋಮವಾರ ಬಂಟ್ವಾಳ ಪುರಸಭೆಯಲ್ಲಿ ನಡೆಯಿತು.
ಇಲ್ಲಿನ ಪುರಸಭೆಯ ಸಾಮಾನ್ಯ ಸಭೆಯು ಪುರಸಭಾಧ್ಯಕ್ಷ ಮಹಮ್ಮದ್ ಶರೀಫ್ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ನಡೆಯಿತು.
ಬಂಟ್ವಾಳ ಪುರಸಭೆಗೆ ಸಂಬಧಿಸಿ ಸರ್ವೇ ಕಾರ್ಯಕ್ಕೆ ಸರ್ವೇ ಇಲಾಖೆಯವರು ಸ್ಪಂದನೆ ನೀಡದೇ ಇರುವ ವಿಚಾರವನ್ನು ಸದಸ್ಯ ಗೋವಿಂದ ಪ್ರಭು ಅವರು ಪ್ರಶ್ನಿಸಿದ್ದರು. ಈ ವೇಳೆ ಪುರಸಭಾ ಎಂಜಿನಿಯರ್ ನೀಡಿದ ಉತ್ತರ ವಿಪಕ್ಷ ಬಿಜೆಪಿಗೆ ಸಮಾಧಾನ ತರಲಿಲ್ಲ.
ನಾನು ಕಳೆದ ಮೂರು ತಿಂಗಳಿನಿಂದ ಈ ವಿಚಾರವನ್ನು ಪ್ರಸ್ತಾಪಿಸುತ್ತಿದ್ದೇನೆ ,ಆದರೂ ಸಮರ್ಪಕ ಉತ್ತರ ದೊರಕುತ್ತಿಲ್ಲ ಎಂದು ಪ್ರಭು ಅವರು ಸಭಾ ತ್ಯಾಗ ನಡೆಸಿದರು. ಈ ವೇಳೆ ಸದಸ್ಯ ಹರಿಪ್ರಸಾದ್ ಮಾತನಾಡಿ, ಹಿರಿಯ ಸದಸ್ಯರಿಗೆ ಗೌರವ ನೀಡದ ಸಭೆಯಲ್ಲಿ ನಾವು ಕೂಡ ಕುಳಿತುಕೊಳ್ಳುವುದಿಲ್ಲ ಎಂದು ಬಿಜೆಪಿಯ ಎಲ್ಲಾ ಸದಸ್ಯರು ಸಭಾ ತ್ಯಾಗ ನಡೆಸಿದರು.
ಈ ವೇಳೆ ಸದಸ್ಯರಾದ ಸಿದ್ದೀಕ್ ಹಾಗೂ ಮುನೀಶ್ ಆಲಿ ಮಾತನಾಡಿ, ಸದಸ್ಯರು ಈ ರೀತಿ ಸಭಾತ್ಯಾಗ ನಡೆಸಿದಾಗ ಆಡಳಿತ ಸುಮ್ಮನೆ ಕೂರುವುದು ಸರಿಯಲ್ಲ. ಹೀಗಾಗಿ ಅವರನ್ನು ಮನವೊಲಿಸಿ ಸಭೆಯಲ್ಲಿ ಕುಳಿತುಕೊಳ್ಳುವಂತೆ ಮಾಡಬೇಕು ಎಂದು ತಿಳಿಸಿದರು. ಬಳಿಕ ಅಧ್ಯಕ್ಷರು, ಆಡಳಿತ ಪಕ್ಷದ ಸದಸ್ಯರು, ಅಧಿಕಾರಿಗಳು ಮನವೊಲಿಕೆಯ ಪ್ರಯತ್ನ ಮಾಡಿದರು. ಸ್ವಲ್ಪ ಹೊತ್ತಿನ ಬಳಿಕ ಬಿಜೆಪಿಯ ಸದಸ್ಯರು ಮತ್ತೆ ಸಭೆಗೆ ಹಾಜರಾದರು.