ವಿಧ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿ ಶಿಕ್ಷಣದ ಗುರಿಯಾಗಬೇಕು.ಮಕ್ಕಳಿಗೆ ಆಟ ಪಾಠಗಳ ಜೊತೆಗೆ ಬದುಕುವ ಕಲೆಯನ್ನು ಕಲಿಸಿದಾಗಲೆ ಶಿಕ್ಷಣಕ್ಕೆ ಒಂದು ಅರ್ಥ ಬರುತ್ತದೆ ಎಂಬ ವಿಚಾರ ಮನಗಂಡು ಶ್ರೀ.ಧರ್ಮಸ್ಥಳ ಆಂಗ್ಲಮಾಧ್ಯಮ ಶಾಲೆ ಧರ್ಮಸ್ಥಳ ಇಲ್ಲಿ ದಿನಾಂಕ 18-03-2021 ರಂದು ಶಾಲೆಯಲ್ಲೇ ತಾವೇ ಪ್ರಾರಂಬಿಸಿದ ಜೇನು ಪೆಟ್ಟಿಗೆಯಲ್ಲಿನ ಜೇನು ಸಂಗ್ರಹ ಮಾಡುವ ಪ್ರಾತ್ಯಕ್ಷಿಕೆಯನ್ನು ಶಾಲಾ ಹಳೆವಿದ್ಯಾರ್ಥಿನಿಯ ಹೆತ್ತವರೂ ಹಾಗೂ ಜೇನುಕೃಷಿಯಲ್ಲಿ ಪರಿಣತಿಯನ್ನು ಹೊಂದಿರುವ ಬಾಬು ಇವರು ನೀಡಿದರು.
ಜೇನುನೊಣಗಳಲ್ಲಿ ಗಂಡು ಹಾಗು ಹೆಣ್ಣು ಜೇನನ್ನು ಗುರುತಿಸುವ ವಿಧಾನ,ರಾಣಿ ಜೇನು ಇತರ ಜೇನಿಗಿರುವ ವ್ಯತ್ಯಾಸ,ರಾಣಿ ಜೇನು ತಯಾರಾಗುವ ಬಗೆ,ರಾಯಲ್ ಜೆಲ್ಲಿ ಅಂದರೇನು ಅದು ಹೇಗಿರುತ್ತೆ,ಜೇನು ತೆಗೆಯುವ ವಿಧಾನ ಅದನ್ನು ಯಂತ್ರಕ್ಕೆ ಹಾಕಿ ತಿರುಗಿಸುವ ವಿಧಾನ ಹಾಗೂ ಅದರ ಸಂಗ್ರಹ ಇತ್ಯಾದಿ ವಿಚಾರಗಳನ್ನು ಪ್ರಾತ್ಯಕ್ಷಿಕೆ ಮುಖಾಂತರ ವಿದ್ಯಾರ್ಥಿಗಳಿಗೆ ಹಾಗೂ ನೆರೆದ ಶಿಕ್ಷಕ ಶಿಕ್ಷಕೇತರ ಸಿಬ್ಬಂದಿಗಳಿಗೆ ತಿಳಿಯಪಡಿಸಿದರು.ಮಕ್ಕಳಿಗೆ ಜೇನು ಹುಟ್ಟುಗಳನ್ನು ಜೇನು ನೊಣ ಸಹಿತ ನೀಡಿ ಜೇನು ನೊಣಗಳ ಭಯವನ್ನು ನಿವಾರಿಸಿದರು.ಅದು ಕಚ್ಚಿದಾಗ ಹೇಗೆ ಅದರ ಸೂಜಿಯನ್ನು ತೆಗೆಯಬೇಕು ಎಂಬಿತ್ಯಾದಿ ವಿಚಾರಗಳನ್ನು ತಿಳಿಯಪಡಿಸಿದರು.ಸಂಗ್ರಹವಾದ ಜೇನನ್ನು ವಿದ್ಯಾರ್ಥಿಗಳಿಗೆ ರುಚಿ ಸವಿಯಲು ನೀಡಿದ್ದು ಈ ಕಾರ್ಯಕ್ರಮದ ವಿಶೇಷ. ಈ ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯಿನಿ ಪರಿಮಳ ಎಂ.ವಿ.ಇವರು ಗಂಡು ಮೊಟ್ಟೆ ಹಾಗೂ ಹೆಣ್ಣು ಮೊಟ್ಟೆಯ ವ್ಯತ್ಯಾಸ,ಅದು ಬೇರೆ ಮನೆ ಮಾಡುವ ಕಾರಣ ಗೊತ್ತಾಗುವ ರೀತಿ ಇತ್ಯಾದಿಗಳನ್ನು ತಿಳಿಯಪಡಿಸಿದರು. ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿ ವೃಂದ ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿಗಳು ಆಸಕ್ತಿಯಿಂದ ಭಾಗವಹಿಸಿದ್ದರು.