ಬಂಟ್ವಾಳ: ಮಂಚಿಯ ಕಾವ್ಯಾಮೃತ ರಸಸ್ವಾದ ನಾಟಕೋತ್ಸವದ ಮೂಲಕ ಎಲ್ಲರಿಗೂ ಸುಖಾನುಭವ ನೀಡುತ್ತಿದೆ ಎಂದು ವಿಟ್ಲ ಜೂನಿಯರ್ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಎಂ.ಅನಂತಕೃಷ್ಣ ಹೆಬ್ಬಾರ್ ಹೇಳಿದರು.
ಬಿ.ವಿ.ಕಾರಂತ ರಂಗಭೂಮಿಕಾ ಟ್ರಸ್ಟ್ ಮಂಚಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ ಮಂಚಿ ನೂಜಿಬೈಲು ಅನುದಾನಿತ ಹಿ.ಪ್ರಾ. ಶಾಲೆಯ ವಠಾರದಲ್ಲಿ ಶುಕ್ರವಾರ ಆರಂಭಗೊಂಡ ಬಿ.ವಿ.ಕಾರಂತ ನೆನಪಿನ ‘ಮಂಚಿ ನಾಟಕೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬಿ.ವಿ.ಕಾರಂತರ ರಂಗಬದುಕು ಎಲ್ಲರಿಗೂ ಮಾದರಿಯಾಗಿದ್ದು, ಟ್ರಸ್ಟ್ ನ ಕ್ರಿಯಾಶೀಲತೆಯ ಚಟುವಟಿಕೆ ಇದನ್ನು ಶಾಶ್ವತವಾಗಿ ನೆಲೆಗೊಳ್ಳುವಂತೆ ಮಾಡಲಿ ಎಂದವರು ಹಾರೈಸಿದರು.
ಬಂಟ್ವಾಳ ತಾಲೂಕು ಪಂಚಾಯತ್ ಅಧ್ಯಕ್ಷ ಚಂದ್ರಹಾಸ ಕರ್ಕೇರ ಅಧ್ಯಕ್ಷತೆ ವಹಿಸಿದ್ದರು ಅವರು ಮಾತನಾಡಿ, ಬಿ.ವಿ.ಕಾರಂತರ ಬದುಕಿನ ಆದರ್ಶಗಳನ್ನು ಮುಂದಿನ ಪೀಳಿಗೆಗೆ ತಲುಪುವಂತಾಗಬೇಕು. ಈ ನಿಟ್ಟಿನಲ್ಲಿ ರಂಗಭೂಮಿಕಾ ಟ್ರಸ್ಟ್ನ ಕಾಳಜಿ ಪ್ರಶಂಸನೀಯ ಎಂದು ಅವರು ಹೇಳಿದರು.
ಮಂಚಿ ನೂಜಿಬೈಲ್ ಅನುದಾನಿತ ಹಿ.ಪ್ರಾ. ಶಾಲೆಯ ಸಂಚಾಲಕಿ ನೂಜಿಬೈಲ್ ಶಾಂತಲಾ ಎನ್. ಭಟ್ ಮಾತನಾಡಿ, ಯುವಪೀಳಿಗೆಗೆ ಮಾದರಿಯಾಗುವಂತ ಸತ್ಯವಂತಿಕೆಯ ಬದುಕನ್ನು ಸಾಗಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಸಂಕಲ್ಪತೊಡುವಂತೆ ಕರೆ ನೀಡಿದರು.
ಮಂಚಿ ಬಿ.ವಿ.ಕಾರಂತ ರಂಗಭೂಮಿಕಾ ಟ್ರಸ್ಟ್ ಅಧ್ಯಕ್ಷ ಕಜೆ ರಾಮಚಂದ್ರ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಟ್ರಸ್ಟ್ ಉಪಾಧ್ಯಕ್ಷರಾದ ಗಣೇಶ್ ಐತಾಳ್ ಸ್ವಾಗತಿಸಿದರು. ಜೊತೆ ಕಾರ್ಯದರ್ಶಿ ಉಮಾನಾಥ ರೈ ವಂದಿಸಿದರು. ಕಾರ್ಯದರ್ಶಿ ಎನ್.ರಮಾನಂದ ಕಾರ್ಯಕ್ರಮ ನಿರ್ವಹಿಸಿದರು.