ಊರ ಕೊನೆಯ ಬಾಗಿಲಲ್ಲಿ
ಒಂದು ಉತ್ಸವ..
ಸತ್ತವರ ಕೂಗಿ ಕೂಗಿ
ಕರೆದು ಮೃಷ್ಟಾನ್ನ ಭೋಜನ
ಇಟ್ಟು ಬಿಡುವುದು..
ವರ್ಷಕ್ಕೊಮ್ಮೆ ಆಗುವ
ಉತ್ಸವ ಅದು..
ಅಂದು ಆ ಊರ ಕೊನೆಯಲ್ಲಿ
ಮಾವಿನ ತೋರಣ
ಬಾಳೆಗಿಡ, ಹೂ ಹಣ್ಣು
ಊರ ಬಾಗಿಲಿಗೆ
ಶೃಂಗಾರ ಬರೆದಿರುತ್ತದೆ…
ಸತ್ತವರ ನೆನೆದು
ಕರೆಯಲು
ಸಂಬಂಧಿಗಳು
ಹಾಜರಿರುತ್ತಾರೆ..
ಸತ್ತವರ ಇಷ್ಟದ ಭೋಜನ
ಪಟ್ಟಿ ಮಾಡಿ
ನಳ ಪಾಕ ಅರಿತವನ ಕೈಯಲ್ಲಿ
ಅಡುಗೆ ಮಾಡಿಸಿ
ಬೃಹತ್ ಬೆಳ್ಳಿ ತಟ್ಟೆಯಲ್ಲಿಟ್ಟು
ಕೂಗಿ ಕರೆಯುವುದು….
ಬಾ ಅಜ್ಜ
ಬಾ ಅಜ್ಜಿ
ಬಾ ಅತ್ತೆ ಬಾ ಮಾವ
ಬಾ ಅಪ್ಪ ಬಾ ಅಮ್ಮ….
ಯಾರು ಸತ್ತರೋ ಅವರನ್ನು.,
ಹೆಸರಿಟ್ಟು ಕರೆಯಬಹುದು..
ಇಟ್ಟು ಕರೆದು
ಹತ್ತು ನಿಮಿಷ ದೂರದಲ್ಲಿ ನಿಂತು
ಆಮೇಲೆ ಬಂದು
ಬಡಿಸಿದನ್ನೆಲ್ಲ ಅಲ್ಲೇ ಚೆಲ್ಲಿ
ಬೆಳ್ಳಿ ಬಟ್ಟಲನ್ನು
ಕಂಕುಳಲ್ಲಿ ಇಟ್ಟು
ಹಿಂದಿರುಗಿ ನೋಡದೇ ಬರುವುದು..!
ಅದೆಷ್ಟೋ
ವೃದ್ಧ, ಹಸಿದ ಹೃದಯಗಳು
ಅವನ್ನೆಲ್ಲ ಕಂಡು
“ಸಾವಾದರು ಬರಬಾರದಿತ್ತೆ”
ಅಂದಿದ್ದಿದೆ..!
✍️ಯತೀಶ್ ಕಾಮಾಜೆ