ದ.ಕ ಜಿಲ್ಲೆಯ ಗುಂಡ್ಯ ಸಮೀಪದ ಹೊಟೇಲ್ ವೊಂದರಲ್ಲಿ ಮಲಯಾಳಂ ಭಾಷೆಯ ಚಾನೆಲ್ ಹಾಕಿದ್ದಾರೆ ಅನ್ನೋ ಕಾರಣಕ್ಕೆ ಕನ್ನಡ ಪರ ಸಂಘಟನೆಯ ಹೋರಾಟಗಾರರು ತಗಾದೆ ತೆಗೆದು ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ. ಸದ್ಯ ಈ ವಿಡಿಯೋ ಪರ-ವಿರೋಧದ ಚರ್ಚೆಯ ಮೂಲಕ ಸುದ್ದಿಯಾಗಿದೆ. ಇರಲಿ ಬಿಡಿ, ಕನ್ನಡ ಪರ ಸಂಘಟನೆಗಳ ಕನ್ನಡ ಪ್ರೇಮದ ಬಗ್ಗೆ ನಮಗೆ ತಕರಾರಿಲ್ಲ. ಆದರೆ ಪ್ರತೀ ಬಾರಿ ಮಂಗಳೂರಿಗರ ಭಾಷಾ ಪ್ರೇಮ ಪ್ರಶ್ನಿಸುವ ಹೋರಾಟಗಾರರೊಮ್ಮೆ ಕೇರಳದ ಕಾಸರಗೋಡಿನತ್ತ ಒಮ್ಮೆ ಹೋಗಿ ಬಂದರೆ ಉತ್ತಮ ಅನಿಸುತ್ತದೆ. ಕಾಸರಗೋಡು ಅನ್ನೋದು ಭೌಗೋಳಿಕವಾಗಿ ಮತ್ತು ಆಡಳಿತಾತ್ಮಕವಾಗಿ ಪೂರ್ಣ ಪ್ರಮಾಣದಲ್ಲಿ ಕೇರಳ ರಾಜ್ಯಕ್ಕೆ ಒಳಪಟ್ಟ ಜಿಲ್ಲೆ. ಅದರೆ ಕನ್ನಡಿಗರೇ ಬಹುಸಂಖ್ಯಾತರಾಗಿರುವ ಕಾಸರಗೋಡನ್ನ ನಮಗೆ ಉಳಿಸಿಕೊಳ್ಳೋಕೆ ಆಗಿಲ್ಲ ಬಿಡಿ. ಹಾಗಂತ ಮಲಯಾಳಂ ಭಾಷಿಗರ ಕೇರಳದ ಮಧ್ಯೆ ಇದ್ದರೂ ಕಾಸರಗೋಡಿಗರ ಕನ್ನಡ ಪ್ರೇಮದ ಬಗ್ಗೆ ಹೆಮ್ಮೆ ಪಡಬೇಕು. ದ.ಕ ಜಿಲ್ಲೆಯ ಗುಂಡ್ಯದ ಹೊಟೇಲ್ ನಲ್ಲಿ ಮಲಯಾಳಂ ಭಾಷೆಯ ಚಾನೆಲ್ ಇಟ್ಟರು ಅಂತ ಅಪಸ್ವರ ಎತ್ತೋ ಕನ್ನಡ ಹೋರಾಟಗಾರರು ಅಗತ್ಯವಾಗಿ ಕೇರಳದ ಕಾಸರಗೋಡಿನತ್ತ ಹೋಗಿ ಬನ್ನಿ. ಮಂಗಳೂರಿನ ತಲಪಾಡಿ ಗಡಿ ದಾಟಿದ್ರೆ ಕೇರಳ ರಾಜ್ಯ ತೆರೆದುಕೊಳ್ಳುತ್ತದೆ. ಆದರೆ ಇಂದಿಗೂ ತಲಪಾಡಿಯಿಂದ ಕಾಸರಗೋಡು ಮತ್ತು ಅದರಾಚೆಗೂ ಕನ್ನಡ ಭಾಷೆ ಕಣ್ಣಿಗೆ ಬೀಳದ ಜಾಗಗಳೇ ಇಲ್ಲ. ಅಂಗಡಿ, ಹೊಟೇಲ್, ವ್ಯಾವಹಾರಿಕ ಕೇಂದ್ರಗಳಲ್ಲಿ ಮಲಯಾಳಂ ಭಾಷೆಯ ಬೋರ್ಡ್ ಗಳ ಜೊತೆಗೆ ಕನ್ನಡ ಭಾಷೆಗೂ ಅದರದ್ದೇ ಆದ ಜಾಗವಿದೆ. ಅಲ್ಲಿನ ಮಲಯಾಳಂ ಶಾಲೆಗಳಲ್ಲಿ ಕನ್ನಡ ಭಾಷಾ ಪಾಠಕ್ಕೂ ಸ್ಥಳವಿದೆ. ಇದನ್ನ ಕೇರಳದ ಮಲಯಾಳಿಗರ ವಿಶಾಲ ಹೃದಯ ಅಂತಿರೋ ಅಥವಾ ಕೇರಳದಲ್ಲಿರೋ ಕನ್ನಡಿಗರ ತಾಕತ್ತು ಅಂತಿರೋ…? ಹಾಗೆ ನೋಡಿದರೆ ಇಲ್ಲಿ ಕೇರಳದ ಮಲಯಾಳಿಗರ ಉದಾರತೆಯ ಜೊತೆಗೆ ಗಡಿನಾಡ ಕನ್ನಡಿಗರ ಭಾಷಾ ಪ್ರೇಮವೂ ಅಡಗಿದೆ. ತಲಪಾಡಿ ಗಡಿಯಿಂದ ಕಾಸರಗೋಡಿನವರೆಗೂ ಹೊಟೇಲ್, ಅಂಗಡಿ… ಅಷ್ಟೇ ಯಾಕೆ? ಅದೆಷ್ಟೋ ಮನೆಗಳಲ್ಲಿ ಕನ್ನಡ ಚಾನೆಲ್ ಗಳದ್ದೇ ಸದ್ದು. ಹಾಗಂತ ಮಲಯಾಳಂ ಭಾಷಿಗರ ಕೇರಳದಲ್ಲಿ ಕನ್ನಡ ಚಾನೆಲ್ ಹಾಕಿದ್ದೀರಾ ಅಂತ ಅಲ್ಲಿನ ಮಲಯಾಳಿಗರು ತಗಾದೆ ತೆಗೆದಿಲ್ಲ. ಆ ಭಾಗದ ಜನರ ಕನ್ನಡ ಭಾಷಾ ಪ್ರೇಮ ಮಲಯಾಳಿಗರ ಮಧ್ಯೆಯೂ ಗಟ್ಟಿಯಾಗಿ ನೆಲೆ ನಿಂತಿದೆ. ಮಂಗಳೂರಿಗೆ ಹೊಂದಿಕೊಂಡ ಗಡಿನಾಡ ಕನ್ನಡಿಗರು ತುಳುವರೇ ಅದರೂ ಅವರ ಕನ್ನಡ ಪ್ರೇಮ ನಿಜಕ್ಕೂ ಮೆಚ್ಚುವಂಥದ್ದು. ನಾವು ಕನ್ನಡಿಗರು ಆ ಗಡಿಯ ಜನರನ್ನು ಆಡಳಿತ ಮತ್ತು ಭೌಗೋಳಿಕವಾಗಿ ನಮ್ಮವರಾಗಿ ಉಳಿಸಿಕೊಂಡಿಲ್ಲವಾದರೂ ಅವರೆಲ್ಲರೂ ಕನ್ನಡಿಗರಿಗಿಂತಲೂ ಹೆಚ್ಚಾಗಿ ಮಲಯಾಳಿ ನೆಲದಲ್ಲಿ ಕನ್ನಡವನ್ನ ಸದ್ದಿಲ್ಲದೇ ಬೆಳೆಸಿದ್ದಾರೆ. ಹಾಗಂತ ಇವರ ಕನ್ನಡ ಭಾಷಾ ಪ್ರೇಮಕ್ಕೆ ಕೇರಳದ ಮಲಯಾಳಿಗರು ಎಂದಿಗೂ ತಡೆಯನ್ನೂ ಒಡ್ಡಿಲ್ಲ. ಇದೇ ಕಾರಣಕ್ಕೆ ನಮ್ಮ ಕನ್ನಡ ಹೋರಾಟಗಾರರು ಅಗತ್ಯವಾಗಿ ಕಾಸರಗೋಡಿಗೊಮ್ಮೆ ಹೋಗಲೇ ಬೇಕು. ಇನ್ನು ಗುಂಡ್ಯದ ವಿಚಾರಕ್ಕೆ ಬರೋದಾದ್ರೆ, ಮಂಗಳೂರಿನ ಮಲಯಾಳಿಗರ ಬಗ್ಗೆಯೂ ಒಂದಷ್ಟು ಮಾತುಗಳನ್ನು ಹೇಳಲೇ ಬೇಕು. ಮಂಗಳೂರಿಗೆ ನಿನ್ನೆ ಮೊನ್ನೆ ಬಂದು ನೆಲೆಸಿರೋ ಮಲಯಾಳಿಗರಿಗೂ ಇಲ್ಲೇ ಹತ್ತಾರು ವರ್ಷಗಳಿಂದ ಬದುಕು ಕಟ್ಟಿಕೊಂಡಿರೋ ಮಲಯಾಳಿಗರಿಗೂ ವ್ಯತ್ಯಾಸಗಳಿವೆ. ಇನ್ನು ದ.ಕ ಜಿಲ್ಲೆಯ ಗುಂಡ್ಯ, ನೆಲ್ಯಾಡಿ, ಇಚಿಲಂಪಾಡಿ, ಕಡಬ, ಶಿರಾಡಿ, ಶಿಬಾಜೆ ಭಾಗಗಳಲ್ಲಿ ಹತ್ತಾರು ವರ್ಷಗಳ ಹಿಂದೆಯೇ ಬಂದು ಬದುಕು ಕಟ್ಟಿಕೊಂಡ ಮಲಯಾಳಿಗರು, ಮಲಯಾಳಿ ಕ್ರಿಶ್ಚಿಯನ್ನರಿದ್ದಾರೆ. ಇವರ ಮಕ್ಕಳು ಇಲ್ಲೇ ಹುಟ್ಟಿ, ಇಲ್ಲಿನ ಕನ್ನಡ ಶಾಲೆಗಳಲ್ಲೇ ಕಲಿತು ಅಪ್ಪಟ ಕನ್ನಡಿಗರಾಗಿಯೇ ಬದುಕುತ್ತಿದ್ದಾರೆ. ಸ್ಥಳೀಯವಾಗಿ ಭಾಷೆಯ ವಿಚಾರದಲ್ಲಿ ಇವರ ಜೊತೆ ಯಾರಿಗೂ ತಕರಾರಿಲ್ಲ. ಮಂಗಳೂರಿನ ತುಳುವಿನ ಜೊತೆಗೆ ಕನ್ನಡವನ್ನೂ ನಿರರ್ಗಳವಾಗಿ ಮಾತನಾಡುವ ಈ ಜನರು ಅಪ್ಪಟ ಕನ್ನಡಿಗರಷ್ಟೇ ಅಲ್ಲ, ಮಂಗಳೂರು ತುಳುವರೂ ಹೌದು. ಸುತ್ತಮುತ್ತ ಹೊಟೇಲ್ ಸೇರಿದಂತೆ ಬೇರೆ ಬೇರೆ ವ್ಯವಹಾರ ಮಾಡಿಕೊಂಡರೂ ಸಂಪರ್ಕ ಮತ್ತು ವ್ಯವಹಾರಕ್ಕೆ ಇಂದಿಗೂ ಇವರ ಭಾಷೆ ಕನ್ನಡ ಇಲ್ಲವೇ ತುಳು. ಮಾತೃ ಭಾಷೆ ಮಲಯಾಳಂ ಆಗಿದ್ದರೂ ಮಣ್ಣಿನ ಭಾಷೆಯನ್ನ ಕಲಿತು ಹೆಮ್ಮೆಯಿಂದ ಬಾಯ್ತುಂಬ ಮಾತನಾಡುವ ಇವರ ಬಗ್ಗೆ ಕನ್ನಡಿಗರಾದ ನಾವು ಗರ್ವ ಪಡಬೇಕು. ಇನ್ನು ಮಲಯಾಳಂ ಚಾನೆಲ್ ಇಟ್ಟರು, ಇನ್ನೊಂದು ಮತ್ತೊಂದು ಅನ್ನೋ ಕಾರಣಕ್ಕೆ ತಗಾದೆ ತೆಗೆಯುವುದೇ ಆದರೆ, ಭಾರತದ ಒಕ್ಕೂಟ ವ್ಯವಸ್ಥೆಯಡಿ ಅದ್ಯಾವತ್ತೂ ಸರಿ ಅನಿಸಲ್ಲ ಬಿಡಿ. ಇಂಥದ್ದೇ ವರ್ತನೆಯನ್ನು ಗಡಿನಾಡ ಕನ್ನಡಿಗರ ಮೇಲೆ ಕೇರಳಿಗರು ತೋರಿದರೂ ಅದು ಭಾಷಾ ಪ್ರೇಮದ ಹೆಸರಿನಲ್ಲಿ ತೋರುವ ದಬ್ಬಾಳಿಕೆಯೇ ಹೊರತು ಮತ್ತೇನೂ ಅಲ್ಲ. ಬೇರೆ ಭಾಷೆಯ ಚಾನೆಲ್ ಇಡಬಾರದು ಅನ್ನೋದಾದ್ರೆ ರಾಜ್ಯದ ಬಹುತೇಕ ಹೈಫೈ ಪಬ್, ಬಾರ್, ಹೊಟೇಲ್ ಸೇರಿದಂತೆ ಅನೇಕ ಕಡೆಗಳಲ್ಲಿ ಕನ್ನಡಿಗ ಗ್ರಾಹಕರೇ ಇದ್ದರೂ ಹಿಂದಿ, ಇಂಗ್ಲೀಷ್ ಭಾಷೆಯ ಚಾನೆಲ್ ಗಳೇ ದಿನಪೂರ್ತಿ ಸದ್ದು ಮಾಡುತ್ತಿರುತ್ತೆ. ಇಂಥವುಗಳನ್ನ ತಡೆಯೋದಕ್ಕೆ ಸಾಧ್ಯವಾ? …ಅದು ಬಿಟ್ಟು ಸಣ್ಣಪುಟ್ಟ ವ್ಯವಹಾರ ಮಾಡೋರ ಮೇಲೆ ಭಾಷಾ ಪ್ರೇಮದ ಹೆಸರಿನಲ್ಲಿ ಗುದ್ದಾಡೋದು ಸರಿ ಅನಿಸಲ್ಲ. ಅದೂ ಇಲ್ಲೇ ಹತ್ತಾರು ವರ್ಷಗಳಿಂದ ಬದುಕು ಕಟ್ಟಿಕೊಂಡು, ಕನ್ನಡ ಭಾಷೆ ಕಲಿತು ವ್ಯವಹರಿಸ್ತಿರೋ ಅಪ್ಪಟ ಕನ್ನಡಿಗರ ಜೊತೆಗಂತೂ ಸರಿಯಾದ ವರ್ತನೆಯಂತೂ ಅಲ್ಲವೇ ಅಲ್ಲ. ಕರ್ನಾಟಕದ ಸಾರ್ವಜನಿಕ ಸ್ಥಳಗಳಲ್ಲಿ ಇತರೆ ಭಾಷೆಯ ಚಾನೆಲ್ ಗಳನ್ನ ಹಾಕಲೇ ಬಾರದು ಅನ್ನೋ ಕಾನೂನು ರೂಪಿಸಲು ಸಾಧ್ಯವಾ? ಕರ್ನಾಟಕದ ಚಿತ್ರಮಂದಿರಗಳಲ್ಲಿ ಬೇರೆ ಭಾಷೆಯ ಸಿನಿಮಾಗಳು ಬರಲೇ ಬಾರದು ಅನ್ನೋದಕ್ಕೆ ಆಗುತ್ತಾ..? ಇನ್ನು ಇದೆಲ್ಲಾ ಭಾಷೆಯ ಮೇಲಿನ ಪ್ರೀತಿ ವ್ಯಕ್ತಪಡಿಸುವ ಮಾನದಂಡ ಅನಿಸುತ್ತಾ?..ಖಂಡಿತಾ ಅನಿಸಲ್ಲ. ಈ ಮಧ್ಯೆ ಪ್ರತೀ ಬಾರಿ ಮಂಗಳೂರಿಗರ ಭಾಷಾ ಪ್ರೇಮ ಚರ್ಚೆಗೆ ಒಳಗಾಗ್ತಿದೆ. ಆದರೂ ನಾವು ಕನ್ನಡವನ್ನ ಪ್ರೀತಿಸಿ ಇತರೆ ಭಾಷೆಗಳನ್ನೂ ಪೋಷಿಸುತ್ತಿದ್ದೇವೆ. ಇಲ್ಲೇ ಬದುಕು ಕಟ್ಟಿಕೊಂಡ ಮಲಯಾಳಿಗರು, ತಮಿಳಿಗರು ಸೇರಿದಂತೆ ಇತರೆ ಭಾಷೆಯ ಜನರಿಗೆ ಕನ್ನಡ ಕಲಿಸಿ ಕನ್ನಡವನ್ನ ಬೆಳೆಸಿದ್ದೇವೆ. ಜೊತೆಗೆ ಕನ್ನಡ ಸಿನಿಮಾಗಳು ಉತ್ತಮ ಅನಿಸಿದಾಗ ಗೆಲ್ಲಿಸಿದ್ದೇವೆ. ನಟರ ಕಟೌಟ್ ಗಳಿಗೆ ಹಾಲು, ತುಪ್ಪ ಎರೆಯದೇ ಇದ್ದರೂ ಮಂಗಳೂರಿಗರು ಕನ್ನಡ ಸಿನಿಮಾಗಳ ಮೇಲೆ ತೋರುವ ಅಭಿಮಾನ ದೊಡ್ಡದು. ಅತಿರೇಖದ ಅಭಿಮಾನದ ಹೊರತಾಗಿ ಕನ್ನಡಿಗರು ಅನಿಸಿಕೊಳ್ಳುವ ಎಲ್ಲದರಲ್ಲೂ ದಕ್ಷಿಣ ಕನ್ನಡಿಗರ ಪಾಲು ದೊಡ್ಡದಿದೆ.
ಭರತ್ ರಾಜ್