ಮಂಗಳೂರು, ಮಾ18: ಕರಾವಳಿಯ ಹೆಮ್ಮೆಯ ಜಾನಪದ ಕ್ರೀಡೆ ಕಂಬಳವನ್ನು ಉತ್ತೇಜಿಸಿ ಪ್ರೋತ್ಸಾಹಿಸಲು ರಾಜ್ಯ ಸರ್ಕಾರ ರೂ.1.00 ಕೋಟಿಗಳ ಸಹಾಯಧನ ಬಿಡುಗಡೆ ಮಾಡಿದ್ದು ಇದು ಅವಿಭಜಿತ ಜಿಲ್ಲೆಯ ಕಂಬಳ ಪ್ರಿಯರಿಗೆ ಖುಷಿ ನೀಡಿದೆ.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರದ ಪ್ರವಾಸೋದ್ಯಮ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಆರ್.ರಾಜಶೇಖರ್ ಈ ಕುರಿತು ಆದೇಶ ಹೊರಡಿಸಿದ್ದು, ಕರಾವಳಿಯ ಜಾನಪದ ಕ್ರೀಡೆಯಾದ ಕಂಬಳವನ್ನು ಪ್ರೋತ್ಸಾಹಿಸಲು ಸಹಾಯಧನ ನೀಡಲು ತೀರ್ಮಾನಿಸಿದೆ.
ಕರಾವಳಿಯ ಜಾನಪದ ಕ್ರೀಡೆಯಾದ ಪ್ರತಿ ಕಂಬಳಕ್ಕೆ ರೂ.5.00ಲಕ್ಷಗಳನ್ನು ಸಹಾಯಧನ ನೀಡಲು ಸರ್ಕಾರ ಆದೇಶ ಹೊರಡಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 10 ಕಂಬಳಗಳನ್ನು ನಡೆಸಲು ರೂ.5.00 ಲಕ್ಷಗಳಂತೆ ರೂ.50.00 ಲಕ್ಷ ಮತ್ತು ಉಡುಪಿ ಜಿಲ್ಲೆಯಲ್ಲಿ 10 ಕಂಬಳಗಳನ್ನು ನಡೆಸಲು ರೂ.5.00 ಲಕ್ಷಗಳಂತೆ ರೂ.10.00 ಲಕ್ಷಗಳನ್ನು ಬಿಡುಗಡೆ ಮಾಡಲಾಗಿದೆ. ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದಿಂದ ಕಂಬಳಗಳಿಗೆ ಸಹಾಯಧನ ನೀಡಲಾಗುವುದು.
ಪ್ರವಾಸೋದ್ಯಮ, ಪರಿಸರ ಹಾಗೂ ಜೀವಿಶಾಸ್ತ್ರ ಸಚಿವರಾದ ಸಿ.ಪಿ. ಯೋಗೇಶ್ವರ ರವರು ಕೆಲವು ದಿನಗಳ ಹಿಂದೆ ಪ್ರವಾಸೋದ್ಯಮ ಇಲಾಖೆಯ ಪ್ರಗತಿ ಪರಿಶೀಲನೆಗಾಗಿ ದಕ್ಷಿಣ ಕನ್ನಡ ಜಿಲ್ಲೆಗೆ ಎರಡು ದಿನಗಳ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಕಂಬಳ ವೀಕ್ಷಿಸಿ ಸ್ಥಳದಲ್ಲಿಯೇ ಪ್ರತಿ ಕಂಬಳಕ್ಕೆ ರೂ.5.00ಲಕ್ಷಗಳ ಸಹಾಯಧನ ಘೋಷಣೆ ಮಾಡಿದ್ದರು. ಈ ಘೋಷಣೆಯ ಹಿನ್ನಲೆಯಲ್ಲಿ, ರಾಜ್ಯ ಸರ್ಕಾರ ಸಹಾಯಧನ ಬಿಡುಗಡೆ ಆದೇಶವನ್ನು ಹೊರಡಿಸಿದೆ.
ಅನುದಾನವನ್ನು ಸಮರ್ಪಕವಾಗಿ ವಿನಿಯೋಗಿಸಿ ಅತ್ಯಧಿಕ ಸಂಖ್ಯೆಯ ಪ್ರವಾಸಿಗರನ್ನು ಕಂಬಳಕ್ಕೆ ಆಕರ್ಷಿಸುವಂತೆ ಮಾಡಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.