ಬಂಟ್ವಾಳ, ಮಾ.30: ಮಸೀದಿಗೆ ನುಗ್ಗಿದ ತಂಡವೊಂದು ಧರ್ಮಗುರುವಿಗೆ ಹಲ್ಲೆ ನಡೆಸಿರುವ ಘಟನೆ ಫರಂಗಿಪೇಟೆಯಲ್ಲಿ ನಿನ್ನೆ ರಾತ್ರಿ ನಡೆದಿದ್ದು ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಫರಂಗಿಪೇಟೆ – ಅಮ್ಮೆಮಾರ್ ರಸ್ತೆಯಲ್ಲಿರುವ ಬಿರ್ರುಲ್ ವಾಲಿದೈನ್ ಮಸೀದಿಯ ಧರ್ಮ ಗುರು, ಕುಂದಾಪುರ ನಿವಾಸಿ ಮುಸ್ತಾಕ್ ಹಲ್ಲೆಗೊಳಗಾದವರು. ಇವರು ದುಷ್ಕರ್ಮಿಗಳಿಂದ ತಪ್ಪಿಸಿಕೊಳ್ಳುವ ಸಂದರ್ಭದಲ್ಲಿ ಕಾಲಿಗೆ ಗಾಯಗಳಾಗಿದ್ದು ತುಂಬೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ರಾತ್ರಿ 12 ಗಂಟೆಯ ಸುಮಾರಿಗೆ ಮಸೀದಿಗೆ ನುಗ್ಗಿರುವ ಮೂರು ಮಂದಿ ಇದ್ದ ತಂಡ ಮಸೀದಿಯ 2ನೇ ಮಹಡಿಯಲ್ಲಿ ಮಲಗಿದ್ದ ಧರ್ಮ ಗುರು ಮುಸ್ತಾಕ್ ಅವರ ಕತ್ತು ಹಿಡಿದು ಹಲ್ಲೆ ನಡೆಸಿದೆ. ಈ ವೇಳೆ ಮುಸ್ತಾಕ್ ಅವರು ದುಷ್ಕರ್ಮಿಗಳನ್ನು ದೂಡಿ ಹಾಕಿ ತಪ್ಪಿಸಿಕೊಂಡು ಕೆಳ ಅಂತಸ್ತಿಗೆ ಓಡಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.
ದುಷ್ಕರ್ಮಿಗಳಿಂದ ತಪ್ಪಿಸಿಕೊಂಡು ಓಡುವಾಗ ಮುಸ್ತಾಕ್ ಅವರ ಕಾಲಿಗೆ ಗಾಯಗಳಾಗಿದ್ದು ತುಂಬೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಸೀದಿಯ ಸಿಸಿ ಕೆಮರಾದಲ್ಲಿ ದುಷ್ಕರ್ಮಿಗಳು ಮಸೀದಿಯೊಳಗೆ ನುಗ್ಗಿರುವ ದೃಶ್ಯ ಸೆರೆಯಾಗಿದ್ದು ಆದರೆ ದುಷ್ಕರ್ಮಿಗಳ ಹೆಲ್ಮೆಟ್ ಧರಿಸಿದ್ದರು ಎಂದು ದೂರು ನೀಡಲಾಗಿದೆ.
ಘಟನೆಯ ಬಗ್ಗೆ ಮಸೀದಿ ಅಧ್ಯಕ್ಷ ಸೈಯದ್ ಬಾವಾ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಖಂಡನೆ: ಮಸೀದಿಗೆ ನುಗ್ಗಿ ಧರ್ಮ ಗುರುವಿಗೆ ದುಷ್ಕರ್ಮಿಗಳು ಹಲ್ಲೆ ನಡೆಸಿರುವ ಘಟನೆಯನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಬಂಟ್ವಾಳ ತಾಲೂಕು ಅಧ್ಯಕ್ಷ ಸಲೀಂ ಫರಂಗಿಪೇಟೆ ಖಂಡಿಸಿದ್ದಾರೆ.
ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯುತ್ತಿರುವ ಧರ್ಮ ಗುರುವಿನ ಆರೋಗ್ಯ ವಿಚಾರಿಸಿದ ಅವರು, ಇತ್ತೀಚಿನ ದಿನಗಳಲ್ಲಿ ಮಸೀದಿ, ದೇವಾಲಯ, ಚರ್ಚ್ ಸಹಿತ ಧಾರ್ಮಿಕ ಕ್ಷೇತ್ರಗಳನ್ನು ಗುರಿಯಾಗಿಸಿ ದುಷ್ಕರ್ಮಿಗಳು ಸಮಾಜದ ಶಾಂತಿ ಕದಡಲು ಪ್ರಯತ್ನಿಸುತ್ತಿದ್ದಾರೆ. ಇಂತಹ ಪ್ರಕರಣಗಳನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರಗಿಸಬೇಕು. ಹಾಗೆಯೇ ಮುಂದಿನ ರಮಝನ್ ತಿಂಗಳಲ್ಲಿ ಪ್ರತೀ ಮಸೀದಿಗೆ ಪೊಲೀಸ್ ಭದ್ರತೆ ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ.