ಮಂಗಳೂರು: ಮಾ. 20: ಕೊರೋನ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕಾಸರಗೋಡಿನಿಂದ ಮಂಗಳೂರಿಗೆ ಬರುವವರಿಗೆ ಶನಿವಾರದಿಂದ ಕೋವಿಡ್ ನೆಗೆಟಿವ್ ವರದಿ ಹೊಂದಿರುವುದು ಕಡ್ಡಾಯಗೊಳಿಸಲಾಗಿದೆ.
ದ.ಕ. ಜಿಲ್ಲೆಗೆ ತಲಪಾಡಿ ಗಡಿ ಮೂಲಕ ಆಗಮಿಸುವವರ ಸಂಖ್ಯೆ ಹೆಚ್ಚಾಗಿದ್ದು, ಕಾಸರಗೋಡು ಜಿಲ್ಲೆಯವರು ಹಾಗೂ ಕೇರಳದ ಇತರ ಜಿಲ್ಲೆಯವರು ಕೋವಿಡ್ ನೆಗೆಟಿವ್ ವರದಿ ಹೊಂದಿರಬೇಕೆಂದು ದ.ಕ. ಜಿಲ್ಲಾಧಿಕಾರಿ ಈ ಹಿಂದೆಯೇ ಆದೇಶ ನೀಡಿದ್ದರು. ಆರಂಭಿಕ ಹಂತದಲ್ಲಿ ಯಾವುದೇ ಪೂರ್ವ ತಯಾರಿಗಳಿಲ್ಲದೆ ಈ ನಿಯಮ ಜಾರಿಗೆ ತಂದ ಸಂದರ್ಭದಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಮುಂದುಡಿ ಆದೇಶ ನೀಡಿದ್ದರು. ಇದರ ಹೊರತಾಗಿ ಪ್ರತಿಯೊಬ್ಬರು ನೆಗೆಟಿವ್ ವರದಿ ಹೊಂದಿರಬೇಕು ಯಾವುದೇ ಸಂದರ್ಭದಲ್ಲಿ ಇದನ್ನು ಕಡ್ಡಾಯಗೊಳಿಸಬಹುದೆಂದು ಅವರು ತಿಳಿಸಿದ್ದರು.
ಗಡಿ ಭಾಗದ ಜನತೆಗೆ ತೊಂದರೆಯಾಗುತ್ತದೆ ಎನ್ನುವ ಕಾರಣದಿಂದಾಗಿ ಕಳೆದ ತಿಂಗಳು ಜಾರಿಗೆ ತಂದಿದ್ದ ಕಡ್ಡಾಯ ನೆಗೆಟಿವ್ ವರದಿ ಹೊಂದಿರುವ ಆದೇಶವನ್ನು ಮುಂದೂಡಲಾಗಿತ್ತು. ಅಲ್ಲದೆ, ಪ್ರತಿಯೊಬ್ಬರು ಜಿಲ್ಲೆಗೆ ಆಗಮಿಸುವವರು ನೆಗೆಟಿವ್ ವರದಿ ಹೊಂದಿರಬೇಕೆಂದು ಆದೇಶ ನೀಡಿದ್ದರು. ಇದೀಗ ಎರಡು ವಾರಗಳ ಕಾಲಾವಕಾಶ ನೀಡಿದ ಬಳಿಕ ನೆಗೆಟಿವ್ ವರದಿ ಕಡ್ಡಾಯಗೊಳಿಸಲಾಗಿದೆ. ಕೇರಳದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಈ ನಿಯಮವನ್ನು ಮತ್ತೆ ಜಾರಿಗೆ ತರಲಾಗಿದೆ.