ಬೆಳ್ತಂಗಡಿ: ಮಾ 12ಈಗಾಗಲೇ ಹಲವೆಡೆ ಮಂಗನ ಕಾಯಿಲೆಯ ಆತಂಕವಿದ್ದು, 6 ಮಂಗಗಳ ಮೃತದೇಹ ಇಂದು ಬೆಳಗ್ಗೆ ಮುಂಡಾಜೆ ಗ್ರಾಮದ ಕಾಯರ್ತೋಡಿ ರಸ್ತೆಯ ಸೀಟ್ ಬಳಿ ರಕ್ಷಿತಾರಣ್ಯ ಪ್ರದೇಶದಲ್ಲಿ ರಸ್ತೆಬದಿ ಪತ್ತೆಯಾಗಿದೆ. ಇದರಿಂದ ಸ್ಥಳೀಯರು ಇನ್ನಷ್ಟು ಆತಂಕಗೊಂಡಿದ್ದಾರೆ.
ಒಂದು ಮರಿ ಮಂಗ ಸಹಿತ 6 ಮಂಗಗಳ ಮೃತ ದೇಹ ರಸ್ತೆ ಬದಿ ಪತ್ತೆಯಾಗಿರುವುದನ್ನು ದಾರಿಹೋಕರು ಗಮನಿಸಿ, ಕೂಡಲೇ ಅರಣ್ಯ ಇಲಾಖೆ ಆರೋಗ್ಯ ಇಲಾಖೆ ಹಾಗೂ ಪಂಚಾಯಿತಿಗೆ ಮಾಹಿತಿ ನೀಡಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೇ ಬೆಳಾಲು ರಸ್ತೆ ಸಮೀಪ ಎರಡು ಮಂಗಗಳ ಮೃತದೇಹ ಸಿಕ್ಕಿದ್ದು, ಅದರ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿತ್ತು.
ಮಂಗಗಳ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ವಿಷ ಪದಾರ್ಥ ಸೇವಿಸಿವೆಯಾ, ಅಥವಾ ಕೃಷಿಗೆ ಉಪಟಳವಾಗಿ ಕೊಂದು ಎಸೆದಿರಬಹುದೇ ಎಂಬ ಅನುಮಾನ ಉಂಟಾಗಿದ್ದು, ಆರೋಗ್ಯ ಇಲಾಖೆ ಪರಿಶೀಲನೆಯಿಂದಷ್ಟೆ ತಿಳಿದುಬರಬೇಕಿದೆ.