ಬಂಟ್ವಾಳ: ಮಾ.11 ಬಿ.ಸಿ.ರೋಡು-ಕೈಕುಂಜೆ ರಸ್ತೆಯ ಕಾಂಕ್ರೀಟ್ ಕಾಮಗಾರಿಗೆ ಸೋಮವಾರ ಚಾಲನೆ ನೀಡಲಾಗಿದ್ದು, ಪ್ರಸ್ತುತ ರಸ್ತೆಯ ಒಂದು ಬದಿಯಲ್ಲಿ ಹಿಂದಿನ ರಸ್ತೆಯನ್ನು ಅಗೆಯುವ ಕಾರ್ಯ ಆರಂಭಿಸಲಾಗಿದೆ. ಬಿ.ಸಿ.ರೋಡು ಸುಂದರೀಕರಣ ಭಾಗವಾಗಿ ಮಾ. 3ರಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು 2ಕೋ.ರೂ.ಗಳ 190ಮೀ. ಉದ್ದದ ಕಾಂಕ್ರೀಟ್ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿದ್ದರು.
ಕೈಕುಂಜೆ ರಸ್ತೆಯು ವಾಹನ ಹಾಗೂ ಜನನಿಬಿಡ ಪ್ರದೇಶವಾಗಿದ್ದು, ಹೀಗಾಗಿ ವಾಹನಗಳು ನಿಂತು ಕಾಮಗಾರಿಗೆ ತೊಂದರೆಯಾಗಬಾರದು ಎಂದು ಸಂಚಾರಿ ಪೊಲೀಸ್ ಸಿಬಂದಿಯನ್ನೂ ನಿಯೋಜಿಸಲಾಗಿದೆ. ಬಂಟ್ವಾಳ ಲೋಕೋಪಯೋಗಿ ಇಲಾಖೆಯ ಮೂಲಕ ಕಾಮಗಾರಿ ನಡೆಯುತ್ತಿದ್ದು, ಈ ಭಾಗದಲ್ಲಿ ವಾಹನಗಳನ್ನು ನಿಲ್ಲಿಸದಂತೆ ಸೂಚನಾ ಫಲಕ ಅಳವಡಿಸಲಾಗಿದೆ.ಜತೆಗೆ ಸ್ಥಳೀಯ ಟೂರಿಸ್ಟ್ ಕಾರು ಪಾರ್ಕಿಂಗ್, ಟೂರಿಸ್ಟ್ ಟೆಂಪೋ ಪಾರ್ಕಿಂಗ್‌ಗಳನ್ನೂ ಸ್ಥಳಾಂತರಿಸಲಾಗಿದೆ.
ಒಂದು ಬದಿಯ ಕಾಮಗಾರಿ ಪೂರ್ಣಗೊಂಡ ಬಳಿಕ ಮತ್ತೊಂದು ಬದಿಯ ಕಾಮಗಾರಿ ಆರಂಭಗೊಳ್ಳುವ ಸಾಧ್ಯತೆ ಇದೆ. ಇಲ್ಲಿ 190 ಮೀ. ಉದ್ದದ 2 ರಸ್ತೆಗಳು ನಿರ್ಮಾಣವಾಗಲಿದ್ದು, ಮಧ್ಯದಲ್ಲಿ ಡಿವೈಡರ್ ಬರಲಿದೆ. ಜತೆಗೆ ಡಾಮಾರು ಕಿತ್ತು ಹೋಗಿರುವ ತಾ.ಪಂ.ಸಂಪರ್ಕ ರಸ್ತೆಗೂ 100ಮೀ. ಡಾಮಾರು ಕಾಮಗಾರಿ ನಡೆಯಲಿದೆ.