ಕಲ್ಲಡ್ಕ: ತಾ.06 ರಂದು ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳ ಶ್ರೀ ನರಹರಿ ಪರ್ವತ ಸದಾಶಿವ ದೇವಸ್ಥಾನ ಹಾಗೂ ಕಲ್ಲಡ್ಕ, ಶ್ರೀ ಉಮಾಮಹೇಶ್ವರಕ್ಷೇತ್ರಕ್ಕೆ ಚಾರಣ ಹಮ್ಮಿಕೊಳ್ಳಲಾಯಿತು.
ಕಲ್ಲಡ್ಕದಿಂದ ಕಾಲ್ನಡಿಗೆಯಲ್ಲಿ ಹೊರಟ ವಿದ್ಯಾರ್ಥಿಗಳು, ಶ್ರೀ ನರಹರಿ ಸದಾಶಿವ ಕ್ಷೇತ್ರಕ್ಕೆ ಭೇಟಿ ನೀಡಿ, ಕ್ಷೇತ್ರದ ಇತಿಹಾಸವನ್ನು ತಿಳಿದುಕೊಂಡು ದೇವರ ಆಶೀರ್ವಾದ ಪಡೆದು, ಬೆಳಗ್ಗಿನ ಉಪಹಾರವನ್ನು ಮುಗಿಸಿ, ಅಲ್ಲಿಂದ ಶ್ರೀ ಉಮಾಮಹೇಶ್ವರ ಕ್ಷೇತ್ರಕ್ಕೆ ಭೇಟಿ ನೀಡಿದರು. ನಂತರ ಶ್ರೀ ಉಮಾಮಹೇಶ್ವರ ಕ್ಷೇತ್ರದಲ್ಲಿ ಸಾಮೂಹಿಕ ಹುಟ್ಟುಹಬ್ಬವನ್ನು ಆಚರಿಸಲಾಯಿತು. ಮಕ್ಕಳು ದೇವರ ಸ್ವರೂಪ, ದೇವರು -ದೇವರನ್ನು ಭೇಟಿ ಮಾಡಿದಂತಿದೆ. ಕ್ಷೇತ್ರದಲ್ಲಿ ಹುಟ್ಟುಹಬ್ಬ ಆಚರಿಸುವುದು ಸಂತಸ ತಂದಿದೆ. ಎಂದು ಶ್ರೀರಾಮ ಶಾಲಾಭಿವೃದ್ಧಿ ಸಮಿತಿಯ ಸದಸ್ಯರಾದ ರಾಕೋಡಿ ಈಶ್ವರ್ ಭಟ್ ಹುಟ್ಟುಹಬ್ಬಆಚರಿಸುವ ಮಕ್ಕಳಿಗೆ ಶುಭಾಶಯ ಕೋರುತ್ತಾ ಹೇಳಿದರು. ಅಧ್ಯಾಪಕ ವೃಂದದವರು ಹುಟ್ಟಹಬ್ಬ ಆಚರಿಸುವ ವಿದ್ಯಾರ್ಥಿಗಳಿಗೆ ಆರತಿ, ಅಕ್ಷತೆ, ತಿಲಕಧಾರಣೆಯನ್ನು ಮಾಡಿ, ಸಿಹಿ ನೀಡಿದರು. ವಿದ್ಯಾರ್ಥಿಗಳು ಭಾರತಮಾತೆಗೆ ಪುಷ್ಪಾರ್ಚನೆ ಮಾಡಿ ನಿಧಿ ಸಮರ್ಪಿಸಿದರು. ಕ್ಷೇತ್ರದಲ್ಲಿ ವಿದ್ಯಾರ್ಥಿಗಳಿಗೆ ಊಟದ ವ್ಯವಸ್ಥೆಯನ್ನು ರಾಕೋಡಿ ಈಶ್ವರ ಭಟ್ ಮಾಡಿಕೊಟ್ಟರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಶ್ರೀರಾಮ ಪ್ರಾಥಮಿಕ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಚಂದ್ರಶೇಖರ್ ಸಾಲ್ಯಾನ್, ಸದಸ್ಯರಾದ ಗಿಲ್ಕಿಂಜ ಕೃಷ್ಣ ಭಟ್, ಶ್ರೀಕಾಂತ್ ಸುರುಳಿಗುಡ್ಡೆ ಹಾಗೂ ಮುಖ್ಯೋಪಾಧ್ಯಾಯರಾದ ರವಿರಾಜ್ ಕಣಂತೂರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಅಧ್ಯಾಪಕರಾದ ಅನ್ನಪೂರ್ಣ ಸ್ವಾಗತಿಸಿ, ರಮ್ಯ ವಂದಿಸಿದರು.