ಬಂಟ್ವಾಳ: ನಮ್ಮ ನೇತ್ರಾವತಿ ನೀರು ಮೊದಲು ನಮಗೆ ಕುಡಿಯಲು ನೀಡಿ ಬಳಿಕ ನೀವು ಮಂಗಳೂರಿಗೆ ಕೊಂಡು ಹೋಗಿ ಎಂದು ಒತ್ತಾಯಿಸಿ ಸಜೀಪದಲ್ಲಿ ಇಂದು ಪ್ರತಿಭಟನೆ ನಡೆಸಿದ ನಾಗರೀಕರು ಕಾಮಗಾರಿಯನ್ನು ನಿಲ್ಲಿಸಿದ ಘಟನೆ ನಡೆದಿದೆ.
ನಮಗೆ ನೀರು ಕೊಡುವ ಭರವಸೆ ನೀಡುವವರೆಗೆ ಮತ್ತು ಅಧಿಕಾರಿಗಳು ಗುತ್ತಿಗೆದಾರರು ಗ್ರಾ.ಪಂ.ನಲ್ಲಿ ವಿಶೇಷ ಸಭೆ ಕರೆದು ಸ್ಪಷ್ಟವಾದ ಮಾಹಿತಿ ನೀಡಿದ ಬಳಿಕ ಕಾಮಗಾರಿ ಆರಂಭಿಸಿ ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಯವರು ಉಳ್ಳಾಲ ಹಾಗೂ ಕೋಟೆಕಾರು ನಗರ ಸ್ಥಳೀಯಾಡಳಿತ ಸೇರಿದಂತೆ ಇತರ ಗ್ರಾಮಗಳಿಗೆ ಕುಡಿಯುವ ನೀರು ಸರಬರಾಜು ಯೋಜನೆ ಯಡಿಯಲ್ಲಿ ಬಂಟ್ವಾಳ ತಾಲೂಕಿನ ಸಜೀಪ ಮೂಡ ಗ್ರಾ.ಪಂ.ವ್ಯಾಪ್ತಿಯ ಆಲಾಡಿ ಎಂಬಲ್ಲಿಂದ ಮಂಗಳೂರಿಗೆ ಕುಡಿಯುವ ನೀರು ಸರಬರಾಜು ಮಾಡುವ ಉದ್ದೇಶದಿಂದ ಸಜೀಪ ಮೂಡ ಗ್ರಾಮದ ಸುಭಾಷ್ ನಗರದಲ್ಲಿ ಕಾಮಗಾರಿ ನಡೆಯುತ್ತಿದೆ.
ಆದರೆ ಸಜೀಪ ಮೂಡ ಗ್ರಾಮದಲ್ಲಿ ಈ ನೀರಿನ ಪೈಪ್ ಲೈನ್ ಹರಿದು ಹೋದರೂ ಸಜಿಪ ಮೂಡ ಗ್ರಾಮಕ್ಕೆ ಮಾತ್ರ ಕುಡಿಯುವ ನೀರು ನೀಡುವ ಯಾವುದೇ ಭರವಸೆ ಸಿಕ್ಕಿಲ್ಲ. ಮೊದಲು ನಮ್ಮ ಗ್ರಾಮಕ್ಕೆ ನೀರು ಕೊಡಿ ಅ ಬಳಿಕ ನೀವು ಮಂಗಳೂರಿಗೆ ನೀರು ಕೊಂಡು ಹೋಗಿ ಎಂಬುದು ಸ್ಥಳೀಯರ ವಾದ. ನೀರು ಕೊಡುವ ಬಗ್ಗೆ ಭರವಸೆ ನೀಡಿದ ಬಳಿಕವೇ ಕಾಮಗಾರಿ ನಡೆಸುವಂತೆ ಪ್ರತಿಭಟನಾಕಾರರು ಸ್ಥಳದಲ್ಲಿ ಒತ್ತಾಯಿಸಿದರು.
ಇದೇ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಜಿ.ಪಂ.ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ಅವರು ಪ್ರತಿಭಟನಾಕಾರರ ಮನವಿ ಸ್ವೀಕರಿಸಿದ ಬಳಿಕ ಸಂಬಂಧಿಸಿದ ಅಧಿಕಾರಿಗಳ ಜೊತೆ ಪೋನ್ ಮೂಲಕ ಮಾತನಾಡಿ ಎರಡು ದಿನಗಳೊಳಗೆ ಗ್ರಾ.ಪಂ.ನಲ್ಲಿ ಸಭೆ ಕರೆದು ನಾಗರೀಕರಿಗೆ ಸ್ಪಷ್ಟವಾದ ಮಾಹಿತಿ ನೀಡಿ ಬಳಿಕ ಕಾಮಗಾರಿ ಮುಂದುವರಿಸಿ ಎಂದು ಅವರು ತಿಳಿಸಿದರು. ಆ ಬಳಿಕ ಪ್ರತಿಭಟನೆಯನ್ನು ಹಿಂದೆಗೆದುಕೊಂಡರು. ಈ ಸಂದರ್ಭದಲ್ಲಿ ಮಾಧ್ಯಮ ವರ ಜೊತೆ ಮಾತನಾಡಿದ ಅವರು ಆರಂಭದಲ್ಲಿ ಸಜೀಪ ಮೂಡ ಸಹಿತ ಐದು ಗ್ರಾಮಗಳನ್ನು ಯೋಜನೆಯಿಂದ ಹೊರಗಿಡಲಾಗಿತ್ತು. ಆದರೆ ಪ್ರಸ್ತುತ ಈ ಗ್ರಾಮಗಳನ್ನು ಯೋಜನೆಗೆ ಸೇರಿಸಲು ಸರ್ವೇ ಕಾರ್ಯಗಳು ಆರಂಭವಾಗಿದೆ. ಜನಪರ ಯೋಜನೆಯಾಗಿದ್ದು ಸ್ಥಳೀಯ ಗ್ರಾಮದ ಜನರ ಬೇಡಿಕೆಗೆ ಸ್ಪಂದಿಸುವ ಬಗ್ಗೆ ಅಧಿಕಾರಿಗಳು ಮುತುವರ್ಜಿವಹಿಸಬೇಕಾಗಿದೆ ಎಂದು ಅವರು ತಿಳಿಸಿದರು.
ನೀರು ಕೊಡಿ
ಪ್ರತಿಭಟನೆಯ ನೇತ್ರತ್ವ ವಹಸಿದ್ದ ದೇವಿಪ್ರಸಾದ್ ಪೂಂಜ ಮಾತನಾಡಿ ಯೋಜನೆಗೆ ಮತ್ತು ಕಾಮಗಾರಿಗೆ ನಮ್ಮ ಯಾವುದೇ ವಿರೋಧ ವಿಲ್ಲ ಆದರೆ ಇಲಾಖೆಯ ಮಲತಾಯಿ ಧೋರಣೆ ವಿರೋಧಿಸಿ ಪ್ರತಿಭಟನೆ ನಡೆಸಿದ್ದೇವೆ, ನಮ್ಮ ಗ್ರಾಮದ ಮೂಲಕ ಇಲ್ಲಿನ ಜಲವನ್ನು ಮಂಗಳೂರಿಗೆ ಸರಬರಾಜು ಮಾಡುವಾಗ ಗ್ರಾಮವನ್ನು ನಿರ್ಲಕ್ಷ್ಯ ಮಾಡಿ ಯೋಜನೆ ಮಾಡಿರುವುದು ಸರಿಯಲ್ಲ , ನಮ್ಮ ಗ್ರಾಮದ ಜನರ ಬೇಡಿಕೆ ಮತ್ತು ಮೂಲಭೂತ ಸೌಕರ್ಯವಾದ ನೀರು ನಮಗೂ ನೀಡಿ ಬಳಿಕ ಬೇರೆ ತಾಲೂಕಿಗೆ ನೀರು ಕೊಂಡು ಹೋಗಿ ಎಂಬುದು ನಮ್ಮ ಬೇಡಿಕೆಯಾಗಿದೆ ಎಂದು ಅವರು ತಿಳಿಸಿದರು.
ಪಿ.ಡಿ.ಒ ಸ್ಪಷ್ಟನೆ
ಸಜೀಪ ಮೂಡ ಗ್ರಾಮವನ್ನು ಯೋಜನೆಗೆ ಸೇರಿಸುವ ಬಗ್ಗೆ ಸಂಬಂಧಿಸಿದ ಇಲಾಖೆ ಪ್ರಸ್ತಾವನೆಯನ್ನು ಕಳುಹಿಸಿದೆ ಎಂದು ಪತ್ರ ಬಂದಿದೆ, ಅಧಿಕೃತ ವಾಗಿ ಸೇರಿಸಿದ ಬಗ್ಗೆ ಯಾವುದೇ ದಾಖಲೆಗಳು ಬಂದಿಲ್ಲ ಎಂದು ಪಿಡಿಒ ನಿರ್ಮಾಲ ಅವರು ತಿಳಿಸಿದ್ದಾರೆ .
ಈ ಸಂದರ್ಭದಲ್ಲಿ ಗ್ರಾ.ಪಂ . ಅಧ್ಯಕ್ಷೆ ಹರಿಣಾಕ್ಷಿ, ಉಪಾಧ್ಯಕ್ಷ ಸಿದ್ದೀಕ್, ಸದಸ್ಯ ರಾದ ಯೋಗೀಶ್ ಬೆಳ್ಚಾಡ, ವಿಶ್ವನಾಥ ಬೆಳ್ಚಾಡ, ಹಮೀದ್ ಕೊಳಕೆ, ಆಶೋಕ್ ಪೂಜಾರಿ, ಪೌಜಿಯಾ, ಶೋಭಾಶೆಟ್ಟಿ, ಯಮುನಾ, ಸುಂದರಿ, ಸೀತಾರಾಮ, ಪ್ರಶಾಂತ್ ಪೂಜಾರಿ, ಅರುಂಧತಿ, ಹೇಮಾವತಿ, ವಿಜಯ, ಅಬ್ದುಲ್ ಅಜೀಜ್, ಪ್ರಮೀಳಾ ಡಿ.ಸೋಜ, ಸ್ಥಳೀಯ ಪ್ರಮುಖ ರಾದ ಹರೀಶ್ ಗಟ್ಟಿ, ಗಿರೀಶ್ ಪೆರ್ವ ಮತ್ತಿತರ ಪ್ರಮುಖ ರು ಹಾಜರಿದ್ದರು.