ಕನ್ಯಾನ: ಮಾ.6ಒಡಿಯೂರು ಶ್ರೀ ಗುರುದೇವ ಐ.ಟಿ.ಐ ಕನ್ಯಾನದಲ್ಲಿ ಶ್ರೀ ಒಡಿಯೂರು ಜನಸೇವಾ ಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿ ಶ್ರೀ ಒಡಿಯೂರು ಜನಸೇವಾ ಕೇಂದ್ರ (ಡಿಜಿಟಲ್ ಸೇವಾ ಕೇಂದ್ರ) ಉದ್ಘಾಟಿಸಿ, ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣವಾಗಲು ಜನಸೇವಾ ಕೇಂದ್ರವು ಜನಪರವಾಗಿ ಕಾರ್ಯ ನಿರ್ವಹಿಸಲಿ ಸಮಾಜದ ಔನತ್ಯಕ್ಕೆ ಪೂರಕವಾಗಿರಲಿ, ಪ್ರತಿಯೊಬ್ಬರೂ ರಾಷ್ಟ್ರಪ್ರೇಮ ಬೆಳೆಸಿಕೊಳ್ಳಿ, ದುಶ್ಚಟಮುಕ್ತ ಸಮಾಜ ನಿರ್ಮಾಣವಾಗಲಿ, ಬದುಕು ಕೌಶಲ್ಯಯುತವಾಗಲಿ, ಎಂದು ಪರಮಪೂಜ್ಯ ಶ್ರೀ.ಶ್ರೀ.ಗುರುದೇವಾನಂದ ಸ್ವಾಮೀಜಿ ಆಶೀರ್ವಚನಗೈದರು.
ಮುಖ್ಯ ಅತಿಥಿಗಳಾದ ಪುತ್ತೂರು ಮೇದಿನಿ ಜನಸೇವಾ ಕೇಂದ್ರದ ಸರಿತಾನವೀನ್ , ಜನಸೇವಾ ಕೇಂದ್ರಗಳಿಂದ ಸಿಗುವ ಸೌಲಭ್ಯಗಳ ಬಗ್ಗೆ ಸ್ಥೂಲವಾಗಿ ವಿವರಿಸಿ, ಶುಭ ಹಾರೈಸಿದರು.
ಇನ್ನೋರ್ವ ಅತಿಥಿ ಕನ್ಯಾನ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಿಜಯಶಂಕರ ಆಳ್ವ ಮಿತ್ತಳಿಕೆ ಇವರು, ಜನಸೇವಾ ಕೇಂದ್ರ ಮತ್ತು ಕಂದಾಯ ಇಲಾಖೆಯ ಸಂಬಂಧ ಹಾಗೂ ಸಕಾಲ ಕಾಯಿದೆ ಬಗ್ಗೆ ಮಾಹಿತಿ ನೀಡಿ ಶುಭ ಹಾರೈಸಿದರು.
ವೇದಿಕೆಯಲ್ಲಿ ಅತಿಥಿಗಳಾಗಿ ಲ|| ಎ.ಸುರೇಶ್ ರೈ, ಗಣಪತಿ ಭಟ್ ಸೇರಾಜೆ, ಹಿರಿಯ ಪತ್ರಕರ್ತ ಯಶವಂತ ವಿಟ್ಲ, ಶ್ರೀ.ಲಿಂಗಪ್ಪ ಗೌಡ ಪನೆಯಡ್ಕ, ಸುನೀತಾ ಮುಂತಾದವರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಒಡಿಯೂರು ವೃತ್ತಿ ಶಿಕ್ಷಣ ವಿಭಾಗವು ನಡೆಸಿಕೊಟ್ಟಂತಹ ಟೈಲರಿಂಗ್ ಮತ್ತು ಕಂಪ್ಯೂಟರ್ ತರಬೇತಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಪೂಜ್ಯ ಶ್ರೀಗಳು ಪ್ರಮಾಣ ಪತ್ರ ವಿತರಿಸಿದರು. ಇದೇ ಸಂದರ್ಭದಲ್ಲಿ ಒಡಿಯೂರು ರಥೋತ್ಸವದಂದು ಐ.ಟಿ.ಐ ವತಿಯಿಂದ ಐಸ್‌ಕ್ಯಾಂಡಿ ತಯಾರಿಕೆ ಮತ್ತು ಮಾರಾಟದಲ್ಲಿ ವಿಶೇಷ ರೀತಿಯಲ್ಲಿ ಸಹಕರಿಸಿದ ಕಿರಿಯ ತರಬೇತಿ ಅಧಿಕಾರಿಗಳು ಹಾಗೂ ವಿದ್ಯಾರ್ಥಿಗಳಿಗೆ ಪೂಜ್ಯ ಶ್ರೀಗಳು ಫಲ ಮಂತ್ರಾಕ್ಷತೆ ನೀಡಿ ಗೌರವಿಸಿದರು.
ಒಡಿಯೂರು ಶ್ರೀ ಗುರುದೇವ ಐ.ಟಿ.ಐ ಕನ್ಯಾನ ಇದರ ಪ್ರಾಚಾರ್ಯರಾದ ಕರುಣಾಕರ ಎನ್.ಬಿ ಪ್ರಾಸ್ತವಿಸಿ ಸ್ವಾಗತಿಸಿದರು, ಅಶ್ವಥ್ ವಂದಿಸಿದರು. ಜಯಂತ್ ಆಜೇರು ರವರು ಕಾರ್ಯಕ್ರಮ ನಿರೂಪಿಸಿದರು.