ಬಂಟ್ವಾಳ: ಮಾ.6ಶೇಕಡಾ 80ರಷ್ಟು ದಂತ ಸಂಬಂಧಿ ರೋಗಗಳನ್ನು ತಡೆಗಟ್ಟಬಹುದಾಗಿದ್ದು, ಆರಂಭದಲ್ಲಿಯೇ ಗುರುತಿಸಿ ಚಿಕಿತ್ಸೆ ನೀಡಿದಲ್ಲಿ ದಂತ ಚಿಕಿತ್ಸೆ ದುಬಾರಿಯಾಗುವುದಿಲ್ಲ. ನಿರಂತರ ದಂತ ವೈದ್ಯರ ಸಂದರ್ಶನ ಸಲಹೆ ಮತ್ತು ಮಾರ್ಗದರ್ಶನದಿಂದ ಬಾಯಿಯ ಆರೋಗ್ಯ ಕಾಪಾಡಿಕೊಳ್ಳಬಹುದಾಗಿದೆ. ಬಾಯಿ ಸ್ವಚ್ಛತೆ ಇರುವವರಿಗೆ ಹೃದಯಾಘಾತ ಮತ್ತು ಮರೆಗುಳಿತನ ರೋಗ ಬರುವ ಸಾಧ್ಯತೆ ಕ್ಷೀಣಿಸುತ್ತದೆ ಎಂದು ಸಂಶೋಧನೆಗಳಿಂದ ತಿಳಿದುಬಂದಿದೆ ಎಂದು ಸುರಕ್ಷಾ ದಂತ ಚಿಕಿತ್ಸಾಲಯದ ದಂತ ವೈದ್ಯರಾದ ಡಾ|| ರಾಜಶ್ರೀ ಮೋಹನ್ ಅಭಿಪ್ರಾಯಪಟ್ಟರು.
ದಿನಾಂಕ: 06-03-2021ನೇ ಶನಿವಾರದಂದು ವಿಶ್ವ ದಂತ ವೈದ್ಯರ ದಿನಾಚರಣೆ ಅಂಗವಾಗಿ ಚೂಂತಾರು ಸರೋಜಿನಿ ಪ್ರತಿಷ್ಠಾನದ ವತಿಯಿಂದ ಸುರಕ್ಷಾ ದಂತ ಚಿಕಿತ್ಸಾಲಯ ಹೊಸಂಗಡಿ ಇಲ್ಲಿ ದಂತ ಆರೋಗ್ಯ ಮಾಹಿತಿ ಶಿಬಿರ ನಡೆಯಿತು. ಈ ದಿನದಂದು ಚಿಕಿತ್ಸಾಲಯಕ್ಕೆ ಭೇಟಿ ನೀಡಿದ ಎಲ್ಲಾ ರೋಗಿಗಳಿಗೆ ಡಾ|| ಮುರಲೀಮೋಹನ್ ಚೂಂತಾರು ಇವರು ಬರೆದ ಸುಮುಖ ದಂತ ಆರೋಗ್ಯ ಮಾರ್ಗದರ್ಶನ ಪುಸ್ತಕವನ್ನು ಉಚಿತವಾಗಿ ವಿತರಿಸಲಾಯಿತು. ಈ ಸಂದರ್ಭದಲ್ಲಿ ಚಿಕಿತ್ಸಾಲಯದ ವೈದ್ಯರಾದ ಡಾ|| ಮುರಲೀ ಮೋಹನ್ ಚೂಂತಾರು, ಡಾ|| ನೇಹಾ ಮುರಲೀಧರನ್, ಸಹಾಯಕಿಯರಾದ ರಮ್ಯಾ, ಶ್ವೇತಾ, ಚೈತ್ರಾ, ಸುಸ್ಮಿತಾ ಉಪಸ್ಥಿತರಿದ್ದರು.