Saturday, April 6, 2024

ಮಾನವನಿಗೆ ಸಂಖ್ಯೆ ಎರಡರ ನಂಟು

ಲೇ: ರಮೇಶ ಎಂ ಬಾಯಾರು, ಎಂ.ಎ; ಬಿ.ಇಡಿ.
ರಾಜ್ಯ ಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು

ಮಾನವನಿಗೂ ಗಣಿತ ಸಂಖ್ಯೆ ಎರಡಕ್ಕೂ ನಿಕಟವಾದ ಸಂಬಂಧವಿದೆ. ದೇಹ ಮತ್ತು ಆತ್ಮ ಒಟ್ಟಾದಾಗ ಮಾತ್ರವೇ ಮಾನವ ದೇಹ ಅಲ್ಲವೇ? ಇಲ್ಲಿಂದಲೇ ನಮ್ಮ ದೇಹಕ್ಕೂ ಸಂಖ್ಯೆ ಎರಡಕ್ಕೂ ಇರುವ ಸಂಬಂಧಗಳನ್ನು ಹೆಣೆಯಲಾರಂಭಿಸುತ್ತೇನೆ. ಮಾನವ ದೇಹದಲ್ಲಿ ರುಂಡ ಮತ್ತು ಮುಂಡ ಎಂಬ ಎರಡು ಪ್ರಮುಖ ಭಾಗಗಳನ್ನು ನಾವು ಗಮನಿಸಲೇ ಬೇಕು.
ದೇಹದಲ್ಲಿ ಎಡ ಮತ್ತು ಬಲ ಎಂಬ ಎರಡು ಪಾರ್ಶ್ವಗಳಿರುವಂತೆ ಹಿಂದೆ ಮತ್ತು ಮುಂದೆ ಎಂಬ ಎರಡು ಭಾಗಗಳೂ ಇವೆ. ಮುಂದಲೆ ಮತ್ತು ಹಿಂದಲೆ ಇರದ ರುಂಡವಿರದು. ಎಡಹುಬ್ಬು ಬಲ ಹುಬ್ಬುಗಳಿರುವಂತೆ ಎಡ ಹಣೆ ಬಲಹಣೆಗಳಿವೆ. ಕಣ್ಣು ಎರಡು, ಕಣ್ಣಗುಡ್ಡೆ ಎರಡು, ಕಣ್ಣೆವೆ ಎರಡು. ಮೂಗಿನ ಹೊಳ್ಳೆ ಎರಡು. ಕಿವಿಗಳು ಎರಡು. ಬಾಯಿಯೊಳಗೆ ದವಡೆ ಎರಡು. ಕಿರುನಾಲಗೆ ಸೇರಿದಾಗ ನಾಲಗೆಯೂ ಎರಡಾಗುವುದು. ಮೇಲೆ ಮತ್ತು ಕೆಳಗೆ ತುಟಿಗಳು ಎರಡು. ಬಲ ಕೆನ್ನೆ ಎಡ ಕೆನ್ನೆ ಎಂಬುದಾಗಿ ಕೆನ್ನೆಯಲ್ಲೂ ಎರಡು ಭಾಗಗಳು. ಹಾಲು ಹಲ್ಲು ಮತ್ತು ಗಡಸು ಹಲ್ಲು ಎಂದು ಹಲ್ಲುಗಳಲ್ಲೂ ಎರಡು ವಿಧಗಳಿವೆ
ಭುಜಗಳು ಎರಡು, ಕೈ ಎರಡು, ಅಂಗೈ ಎರಡು, ಮುಂಗೈ ಎರಡು, ಹೆಬ್ಬೆರಳು ಎರಡು, ತೋರು ಬೆರಳು ಎರಡು, ನಡು ಬೆರಳೆರಡು, ಉಂಗುರ ಬೆರಳೆರಡು, ಕಿರುಬೆರಳೆರಡು. ಕಂಕುಳ ಎರಡು. ಮಣಿಕಟ್ಟು ಎರಡು. ಕಾಲೆರಡು, ಪಾದವೆರಡು, ಹಿಮ್ಮಡಿ ಎರಡು, ಮುಮ್ಮಡಿ ಎರಡು. ಮಂಡಿಯೆರಡು. ತೊಡೆಗಳೆಷ್ಟಿವೆ? ಎರಡಲ್ಲವೇ? ಗೆಜ್ಜೆ ಹಾಕಲು ಕಣಕಾಲು ಎರಡು. ಕಾಲ ಬೆರಳುಗಳಲ್ಲೂ ಕೈ ಬೆರಳುಗಳಂತೆ ಜೋಡಿಗಳೇ ಇವೆಯಲ್ಲವೇ?
ಮಿದುಳಿನಲ್ಲೂ ಎಡ ಬಲವೆಂದು ಭಾಗ ಎರಡು. ಮನಸ್ಸು ಮತ್ತು ಮಿದುಳು ಎರಡೂ ಪರಸ್ಪರ ಸಂಬಂಧಿಗಳು. ರಕ್ತನಾಳಗಳು ಎರಡುವಿಧ. ಶುದ್ಧ ಮತ್ತು ಅಶುದ್ಧ ರಕ್ತ ನಾಳಗಳೇ ಅವು. ಹೃದಯದೊಳಗೆ ಎಡ ಬಲವೆಂದು ಹೃತ್ಕರ್ಣಗಳೆರಡು. ಶ್ವಾಸಕೋಶದಲ್ಲೂ ಎಡಬಲಗಳೆಂಬ ವಿಭಾಗ. ಅದು ನಡೆಸುವ ಕೆಲಸ ಎರಡು: ಉಚ್ಛ್ವಾಸ ಮತ್ತು ನಿಶ್ವಾಸ. ಉಸಿರಾಟದಲ್ಲೂ ಪ್ರಧಾನವಾಗಿ ಎರಡು ಅನಿಲಗಳ ಪಾತ್ರ- ಆಮ್ಲಜನಕ ಮತ್ತು ಅಂಗಾರಾಮ್ಲ ಅನಿಲ. ಹೊಟ್ಟೆಯ ಒಳಗೆ ಸಣ್ಣ ಕರುಳು ಮತ್ತು ದೊಡ್ಡ ಕರುಳು. ದೇಹಕ್ಕೆ ಬೇಡವಾದ ಶೌಚವಸ್ತುಗಳ ಘನ ಮತ್ತು ದ್ರವವೆಂಬ ಎರಡು ರೂಪಗಳಲ್ಲಿಯೇ (ಮಲ ಮೂತ್ರ) ಹೊರ ಬರುತ್ತದೆ. ಜ್ಞಾನೇಂದ್ರಿಯಗಳು ಇತರರಿಗೆ ಗೋಚರಿಸುವಂತೆ ಹೊರ ಹಾಕುವ ಜಲ ಎರಡು-ಅಕ್ಷಿ ಜಲ ಮತ್ತು ಸ್ವೇದ ಜಲ.
ಬಿಳಿ ಮತ್ತು ಕೆಂಪು ಎಂಬುದಾಗಿ ಎರಡು ಜಾತಿಯ ರಕ್ತಕಣಗಳು. ಮುಖದಲ್ಲಿ ಬೆಳೆಯುವುದು ಗಡ್ಡ ಮತ್ತು ಮೀಸೆ, ದೇಹದಲ್ಲಿದೆ ಕೂದಲು ಮತ್ತು ರೋಮ.
ಸತ್ಯ ಮಿಥ್ಯ, ಆಸ್ತಿಕ ನಾಸ್ತಿಕ, ಗಂಡು ಹೆಣ್ಣು, ನಡೆ ನುಡಿ, ವೃತ್ತಿ ಪ್ರವೃತ್ತಿ, ಸಜ್ಜನ ಕ್ರೂರಿ, ಮೃದು ಮನಸ್ಸು ಮತ್ತು ಕಠಿಣ ಮನಸ್ಸು ಹೀಗೆ ಭಾವನೆ ಮತ್ತು ಸ್ವಭಾವ ವಲಯಗಳಲ್ಲೂ ಅವಳಿಗಳನ್ನು ಕಾಣುತ್ತೇವೆ. ಗಂಡ ಹೆಂಡತಿ ಇಬ್ಬರು. ಆರೋಗ್ಯ ಇಲಾಖೆಯ ಸೂತ್ರದಂತೆ ಸುಖ ಸಂಸಾರಕ್ಕಿಬ್ಬರು ಮಕ್ಕಳು. ಮಕ್ಕಳ ಬಗ್ಗೆ ಮಾನವನ ಅಫೇಕ್ಷೆಯೂ ಆರತಿಗೊಂದು, ಕೀರುತಿಗೊಂದು ಅಲ್ಲವೇ?
ಸಂಬಂಧವಾಚಕ ಪದಗಳಲ್ಲಿ ಹೆಚ್ಚಿನವು ಎರಡಕ್ಷರದೊಳಗೆಯೇ ಸುತ್ತುತ್ತವೆ- ಅಣ್ಣ ಅಕ್ಕ, ಅಪ್ಪ ಅಮ್ಮ, ಅಜ್ಜ ಅಜ್ಜಿ, ಮಾಮ ಮಾಮಿ, ಪಿಜ್ಜ ಪಿಜ್ಜಿ, ಪತಿ ಪತ್ನಿ, ಶತ್ರು ಮಿತ್ರ, ಗುರು ಶಿಷ್ಯ, ಸೊಸೆ, ಮಗ, ಸತಿ ಪತಿ……ಹೀಗೆ.
ಮನುಷ್ಯ ಹುಟ್ಟುತ್ತಾನೆ ಮತ್ತು ಸಾಯುತ್ತಾನೆ. ಅವನು ದಿನಾ ಹಗಲು ಮತ್ತು ರಾತ್ರಿಗಳನ್ನು ನೋಡುತ್ತಾನೆ. ಮಾನವನಿಗೆ ಕಾಣಿಸುವುದು ಭೂಮಿ ಮತ್ತು ಆಕಾಶ ಮಾತ್ರ. ಜೀವನದಲ್ಲಿ ಅವನು ಅನುಭವಿಸುವುದು ಸುಖ ಮತ್ತು ದು:ಖ. ದುಡಿಮೆ ಮತ್ತು ವಿಶ್ರಾಂತಿಯೇ ಅವನ ದೈನಂದಿನ ದಿನಚರಿ. ನಿದ್ದೆಯಲ್ಲಿ ವಿಶ್ರಾಂತಿ, ಎಚ್ಚರದಲ್ಲಿ ದುಡಿಮೆ.
ಹೀಗೆ ಮಾನವನಿಗೆ ಸಂಖ್ಯೆ ಎರಡರ ಜೊತೆಗೆ ಅಗಾಧ ಮತ್ತು ಅವಿಚ್ಛಿನ್ನವಾದ ನಂಟಿದೆ. ನಾವು ಹಸಿಯನ್ನೂ ತಿನ್ನ ಬಹುದು ಬೇಯಿಸಿದುದನ್ನೂ ತಿನ್ನಬಹುದು. ಹಣ್ಣು ಯಾ ಕಾಯಿ ಎರಡನ್ನೂ ತಿನ್ನ ಬಹುದು. ಸಹಾಯ ಮಾಡಬಹುದು ಅಥವಾ ಸಹಾಯ ಕೇಳಬಹುದು. ಹೀಗೆ ಬದುಕಿನ ಬಹಳಷ್ಟು ವಿಚಾರಗಳಲ್ಲಿ ಮಾನವನಿಗೆ ಬಹಳ ಬಲಶಾಲಿಯಾಗಿಯೇ ಸಂಖ್ಯೆ ಎರಡರ ನಂಟು ಇದೆ. ಆದರೆ ನಮ್ಮೊಳಗೆ ಎರಡು ಮನಸ್ಸುಗಳಿರಬಾರದು. ಮನೆಯೊಳಗೆ ಎರಡು ಸಿದ್ಧಾಂತಗಳಿರಬಾರದು. ಇವು ಒಂದಾಗಿಯೇ ಇರುವುದರಿಂದ ವ್ಯಕ್ತಿಗೆ ಶೋಭೆ ಬರುತ್ತದೆ ಹಾಗೂ ಸಮಾಜದ ಹಿತಕ್ಕೆ ಕಾರಣವಾಗುತ್ತದೆ ಎಂಬುದನ್ನು ನಾವು ಅರಿತಿರಬೇಕು

More from the blog

ಕೊಳವೆ ಬಾವಿಗೆ ಬಿದ್ದ 2 ವರ್ಷದ ಕಂದಮ್ಮ : ರಕ್ಷಣೆಗೆ ಅರ್ಧ ಅಡಿಯಷ್ಟೇ ಬಾಕಿ

ವಿಜಯಪುರ: ಕೊಳವೆ ಬಾವಿಗೆ ಬಿದ್ದಿರುವ ಮಗು ಸಾತ್ವಿಕ ಸುರಕ್ಷಿತವಾಗಿದ್ದು, ರಕ್ಷಣಾ ಕಾರ್ಯಾಚರಣೆ ಅಂತಿಮ ಹಂತಕ್ಕೆ ಬಂದಿದೆ. ಮಗು ಸುರಕ್ಷಿತವಾಗಿದ್ದು, ಕಾರ್ಯಾಚರಣೆ ಆಶಾದಾಯಕವಾಗಿದೆ. 16 ಅಡಿ ಆಳದಲ್ಲಿರುವ ಸಾತ್ವಿಕ್ ರಕ್ಷಣೆಗಾಗಿ 22 ಅಡಿ ಆಳದವರೆಗೆ ಸುರಂಗ...

ಮಿತಿ ಮೀರಿದ ತಾಪಮಾನ : ಖಡಕ್​ ಎಚ್ಚರಿಕೆ ಕೊಟ್ಟ ಹವಾಮಾನ ಇಲಾಖೆ

ಬೆಂಗಳೂರು: ರಾಜ್ಯದಲ್ಲಿ ಬಿರು ಬಿಸಿಲು ಹೆಚ್ಚಳವಾಗುತ್ತಿದ್ದು ಮುಂದಿನ 14 ದಿನಗಳ ಕಾಲ ಬಿಸಿಗಾಳಿ ಬೀಸಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿಗಾ ಕೇಂದ್ರ (KSNDMC) ಮುನ್ಸೂಚನೆ ನೀಡಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಏಪ್ರಿಲ್​...

ಮನೆಯ ಮಹಡಿಯಿಂದ ಬಿದ್ದು ಬಾಲಕ ಸಾವು

ಬಂಟ್ವಾಳ: ಮನೆಯ ಮಹಡಿಯ ಮೇಲಿಂದ ಕೆಳಗೆ ಬಿದ್ದು ಬಾಲಕನೋರ್ವ ಮೃತಪಟ್ಟ ಘಟನೆ ಎ.‌ ೧ರ ಮುಂಜಾನೆ ನಡೆದಿದೆ. ಬಂಟ್ವಾಳ ಜಕ್ರಿಬೆಟ್ಟು ನಿವಾಸಿ ದಿನೇಶ್ ಪೂಜಾರಿ ಅವರ ಪುತ್ರ ಆದಿಶ್(೧೫) ಮೃತಪಟ್ಟ ಬಾಲಕ. ಆತ ಮನೆಯಲ್ಲಿ ದೊಡ್ಡಮ್ಮನ...

ಮಾಂಸ ಪ್ರಿಯರಿಗೆ ಬೆಲೆ ಏರಿಕೆ ಶಾಕ್.. ಕೋಳಿ ಮಾಂಸದ ದರ ಏರಿಕೆ

ಮಂಗಳೂರು: ಕೋಳಿಮಾಂಸ, ಮೀನಿನ ದರ ಏರುಗತಿ ಯಲ್ಲಿ ಸಾಗುತ್ತಿದ್ದು ಮಾಂಸಾಹಾರ ಪ್ರಿಯರ ಜೇಬಿಗೂ ಕತ್ತರಿ ಬೀಳುವಂತಾಗಿದೆ. ಪ್ರಸ್ತುತ ಕೋಳಿಮಾಂಸಕ್ಕೆ (ವಿದ್‌ ಸ್ಕಿನ್‌) ಕೆ.ಜಿ.ಗೆ ಬ್ರಾಯ್ಲರ್‌ ಕೆಲವು ಕಡೆ 235-240 ರೂ., ಟೈಸನ್‌ 270 ರೂ....