ವಿಟ್ಲ: ನಗರಗಳಲ್ಲಿ ಸಿಗುವ ಸವಲತ್ತುಗಳನ್ನು ಶಿಬಿರಗಳ ಮೂಲಕ ಗ್ರಾಮೀಣ ಭಾಗದ ಜನರಿಗೆ ನೀಡುವ ಪ್ರಯತ್ನ ಮಾಡಲಾಗುತ್ತಿದೆ. ಆರೋಗ್ಯದ ಬಗ್ಗೆ ಹೆಚ್ಚಿನ ನಿಗಾ ಇಟ್ಟು ಶರೀರಕ್ಕೆ ಅಗತ್ಯವಿರುವ ಕಾರ್ಯಗಳಿಗೆ ಹೆಚ್ಚಿನ ಒತ್ತು ನೀಡುವ ಕಾರ್ಯವಾಗಬೇಕು. ದುಂದು ವೆಚ್ಚಗಳನ್ನು ಮಾಡದೇ ಬದುಕು ನಡೆಸುವುದನ್ನು ರೂಪಿಸಿಕೊಳ್ಳಬೇಕು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಿಟ್ಲ ಬಿ. ಸಿ. ಟ್ರಸ್ಟ್ ಯೋಜನಾಧಿಕಾರಿ ಚೆನ್ನಪ್ಪ ಗೌಡ ಹೇಳಿದರು.
ಅವರು ಮುಳಿಯ ತಿಮ್ಮಪ್ಪಯ್ಯ ಸ್ಮಾರಕ ಶಾಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ. ಟ್ರಸ್ಟ್ ಮುಳಿಯ ಅಳಿಕೆ, ಜಿಲ್ಲಾ ಅಂಧತ್ವ ನಿವಾರಣಾ ಘಟಕ ಮಂಗಳೂರು, ತಾಲೂಕು ಆಸ್ಪತ್ರೆ ಬಂಟ್ವಾಳ, ಸಮುದಾಯ ಆರೋಗ್ಯ ಕೇಂದ್ರ ವಿಟ್ಲದ ಆಶ್ರಯದಲ್ಲಿ ಉಚಿತ ಬೃಹತ್ ನೇತ್ರ ಚಿಕಿತ್ಸಾ ಶಿಬಿರ ಹಾಗೂ ಗ್ಲಾಕೋಮಾ ಮಾಹಿತಿ ಶಿಬಿರದಲ್ಲಿ ಮಾತನಾಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ವಿಟ್ಲ ವಲಯ ಜನಜಾಗೃತಿ ವೇದಿಕೆ ನಿಕಟಪೂರ್ವ ಅಧ್ಯಕ್ಷ ಬಾಲಕೃಷ್ಣ ಕಾರಂತ ಎರುಂಬು ಮಾತನಾಡಿ ಜನರ ಸ್ಪಂದನೆಯಿಂದ ನಡೆಯುವ ಕಾರ್ಯಕ್ರಮ ಯಶಸ್ವಿಯಾಗುತ್ತದೆ. ಸಮಾಜ ಸೇವೆಯ ಬದ್ಧತೆ ಇದ್ದಾಗ ಗ್ರಾಮಾಂತರ ಭಾಗದ ಜನರಿಗೆ ಸವಲತ್ತುಗಳು ಸಿಗುತ್ತದೆ. ಕಣ್ಣು ಮನುಷ್ಯನಿಗೆ ಅತೀ ಅಗತ್ಯವಾಗಿದ್ದು, ಅದರ ಆರೋಗ್ಯದ ಬಗ್ಗೆ ಹೆಚ್ಚಿನ ಜಾಗೃತಿ ವಹಿಸಬೇಕು ಎಂದು ತಿಳಿಸಿದರು.
ಕಣ್ಣಿನ ತಪಾಸಣೆಯಲ್ಲಿ ಸುಮಾರು ೧೩೫ ಮಂದಿ ಭಾಗವಹಿಸಿದರು. ಸುಮಾರು ೬೭ ಕನ್ನಡ ವಿತರಣೆ ನಡೆಯಿತು. ೭ ಮಂದಿ ಶಸ್ತ್ರಚಿಕಿತ್ಸೆಗೆ ಶಿಫಾರಸ್ಸು ಮಾಡಲಾಯಿತು.
ಬಂಟ್ವಾಳ ತಾಲೂಕು ಆಸ್ಪತ್ರೆಯ ನೇತ್ರ ತಜ್ಞ ಡಾ. ಸೌಮ್ಯ ಪಿ. ಡಿ., ವಿಟ್ಲ ಸಮುದಾಯ ಆರೋಗ್ಯ ಕೇಂದ್ರದ ನೇತ್ರಾಧಿಕಾರಿ ಶ್ರೀನಿಧಿ, ಅಳಿಕೆ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಸೂರ್ಯನಾಥ ಆಳ್ವ ಮಿತ್ತಳಿಕೆ, ರಾಮ ಪೂಜಾರಿ ತಾಳಿಪಡ್ಪು, ವೆಂಕಟಕೃಷ್ಣ ಶರ್ಮ, ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ ಮುಳಿಯ ಅಧ್ಯಕ್ಷ ಯಶೋದ ಉಪಸ್ಥಿತರಿದ್ದರು.
ವಿಶ್ರುತಾ ಪ್ರಾರ್ಥಿಸಿದರು. ಶಿಕ್ಷಕಿ ಮಮತಾ ಸ್ವಾಗತಿಸಿದರು. ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ ಅಳಿಕೆ ಅಧ್ಯಕ್ಷ ಬಾಲಕೃಷ್ಣ ಪೂಜಾರಿ ಪ್ರಸ್ತಾಪನೆಗೈದರು. ಕಾಮಧೇನು ಸ್ವ-ಸಹಾಯ ಸಂಘದ ಸದಸ್ಯ ಉದಯಕುಮಾರ್ ವಂದಿಸಿದರು. ಮೇಲ್ವಿಚಾರಕ ರಮೇಶ್ ಎಸ್. ಕಾರ್ಯಕ್ರಮ ನಿರೂಪಿಸಿದರು.