ಪುತ್ತೂರು : ಹಿರಿಯ ಯಕ್ಷಗಾನ ಕಲಾವಿದ ಪುತ್ತೂರು ಶ್ರೀಧರ ಭಂಡಾರಿ (73) ಇಂದು ಮುಂಜಾನೆ ನಿಧನರಾಗಿದ್ದಾರೆ. ತೆಂಕು ತಿಟ್ಟು ಯಕ್ಷಗಾನ ಕ್ಷೇತ್ರದಲ್ಲಿ ಸುದೀರ್ಘ ಆರು ದಶಕಗಳ ಕಾಲ ಸೇವೆ ಸಲ್ಲಿಸಿ, ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿಗಳನ್ನು ಗಳಿಸಿದ್ದರು.
ಅವರು ಪತ್ನಿ, ಪುತ್ರ, ಮೂವರು ಪುತ್ರಿಯರು ಹಾಗೂ ಯಕ್ಷಾಭಿಮಾನಿಗಳನ್ನು ಹೊಂದಿದ್ದಾರೆ. ಶ್ರೀಧರ ಭಂಡಾರಿ ಅವರು ತಮ್ಮ 12ನೇ ವಯಸ್ಸಿನಲ್ಲೇ ಯಕ್ಷಗಾನ ಕಲಿತು, 15ನೇ ವಯಸ್ಸಿನಲ್ಲಿ ರಂಗಸ್ಥಳ ಏರಿದ್ದರು.
ಸುಬ್ರಹ್ಮಣ್ಯ ಮೇಳ, ಬಾಳಂಬೆಟ್ಟು ಮೇಳ, ಪುತ್ತೂರು ಮೇಳಗಳಲ್ಲಿ ಸೇವೆ ಸಲ್ಲಿಸಿದ ಶ್ರೀಧರ ಭಂಡಾರಿ ಅವರು, ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ಚರ ಮೇಳದಲ್ಲಿ ಸುದೀರ್ಘ 45 ವರ್ಷಗಳ ಕಾಲ ಪ್ರಮುಖ ವೇಷಧಾರಿಯಾಗಿದ್ದರು.
ಯಕ್ಷಗಾನದ ಸಿಡಿಲಮರಿ, ರಂಗಸ್ಥಳದ ರಾಜ, ಯಕ್ಷನಾಟ್ಯ ಚತುರ, ಶತ ಗಣಗಳ ರಾಜ ಇತ್ಯಾದಿ ಬಿರುದುಗಳನ್ನು ಪಡೆದಿದ್ದ ಇವರನ್ನು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಯಕ್ಷಗಾನ ಅಕಾಡೆಮಿ ಪ್ರಶಸ್ತಿಯೂ ಸೇರಿದಂತೆ ಅನೇಕ ಪ್ರಶಸ್ತಿ, ಪುರಸ್ಕಾರಗಳು ಅರಸಿ ಬಂದಿದ್ದವು. ರಾಜ್ಯ, ದೇಶ, ಅಂತಾರಾಷ್ಟ್ರೀಯ ಮಟ್ಟಗಳಲ್ಲಿ 150ಕ್ಕಿಂತಲೂ ಹೆಚ್ಚಿನ ಪುರಸ್ಕಾರಗಳನ್ನು ಇವರು ಪಡೆದಿದ್ದರು.