ಬಂಟ್ವಾಳ: ಜಾಗತಿಕ ಮಟ್ಟದಲ್ಲಿ ಹವಾಮಾನ ವ್ಯತ್ಯಾಸಗಳು ಅಗುವುದರ ಹಿನ್ನೆಲೆಯಲ್ಲಿ ಪರಿಸರದ ರಕ್ಷಣೆ ಅಗತ್ಯವಿದೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಅವರು ಹೇಳಿದರು.
ಅವರು ಅರಣ್ಯ ಇಲಾಖೆಯ ಕಾವಳಪಡೂರು ಗ್ರಾಮದ ಆಲಂಪುರಿಯಲ್ಲಿ ನಿರ್ಮಾಣ ಗೊಂಡ ಸಾಲು ಮರದ ತಿಮ್ಮಕ್ಕ ವೃಕ್ಷೋದ್ಯಾನವನ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದರು.
ಅರಣ್ಯ ಇಲಾಖೆಯ ಸಚಿವರಾಗಿದ್ದ ಸಂದರ್ಭದಲ್ಲಿ 2011 ನೇ ಇಸವಿಯಲ್ಲಿ ಅರಣ್ಯ ಪ್ರದೇಶದ ಬೆಳವಣಿಗೆ ಕಾರ್ಯಕ್ರಮ ಯೋಜನೆಗಳು ಇದ್ದಾಗ ಪ್ರತಿಯೊಂದು ತಾಲೂಕಿನಲ್ಲಿ ಸಾಲುವಮರ ತಿಮ್ಮಕ್ಕ ವೃಕ್ಷ ಉದ್ಯಾನವನ ಆಗಬೇಕು ಎಂಬ ಯೋಜನೆ ಮಾಡಿದ್ದೆ.
ಪ್ರಸ್ತುತ ಪ್ರತಿ ತಾಲೂಕಿನಲ್ಲಿ ನಿರ್ಮಾಣವಾಗುತ್ತಿದೆ ಇದು ನನಗೆ ಸಂತಸ ತಂದಿದೆ. ಅಪೇಕ್ಷೆಯಂತೆ ಎರಡು ಸಾಲು ಮರ ತಿಮ್ಮಕ್ಕ ಉದ್ಯಾನವನ ತಾಲೂಕಿನಲ್ಲಿ ಇದೆ. ರಾಜ್ಯದಲ್ಲಿ ಅನೇಕ ಕಡೆ ಅರಣ್ಯ ಇಲಾಖೆಗೆ ಸಂಬಂಧಿಸಿದ ಅನೇಕ ಯೋಜನೆಗಳು ಜಾರಿಯಾಗಿತ್ತು.
ಅನೇಕ ಹೊಸ ಹೊಸ ಕಾರ್ಯ ಕ್ರಮಗಳ ಮೂಲಕ ಸುಮಾರು 10 ಸಾವಿರ ಹೆಕ್ಟೇರ್ ಅರಣ್ಯ ಜಾಸ್ತಿಯಾಗಿದೆ. ಅರಣ್ಯ ಇಲಾಖೆಯ ಆಮಂತ್ರಣ ದಂತೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೇನೆ. ಪ್ರಸ್ತುತ ಆಲಂಪುರಿಯ ಟ್ರೀ ಪಾರ್ಕ್ ಉತ್ತಮವಾಗಿ ಬೆಳೆದಿದೆ, ನೋಡಿ ಅತೀವ ಸಂತೋಷವಾಗಿದೆ , ಅಧಿಕಾರಿಗಳು ಉತ್ತಮವಾಗಿ ಕೆಲಸ ಮಾಡಿದ್ದಾರೆ ಎಂದು ಅವರು ಅಭಿನಂದಿಸಿದರು.
ಈ ಟ್ರೀ ಪಾರ್ಕ್ ನ್ನು ಬೇರೆ ಬೇರೆ ರೂಪದಲ್ಲಿ ಅಭಿವೃದ್ಧಿ ಪಡಿಸುವ ಆಸೆ ಇತ್ತು ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಜಿ.ಪಂ.ಸದಸ್ಯ ಪದ್ಮಶೇಖರ್ ಜೈನ್, ತಾ.ಪಂ.ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಅಬ್ಬಾಸ್ ಆಲಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಮಲ್ಲಿಕಾ ವಿ.ಶೆಟ್ಟಿ, ತಾ.ಪಂ.ಸದಸ್ಯೆ ಧನಲಕ್ಮೀ ಬಂಗೇರ, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪ್ರಕಾಶ್ ನೆಟಾಲ್ಕರ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ!ವಿ.ಕರಿಕಲನ್ , ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುಬ್ರಹ್ಮಣ್ಯ ರಾವ್, ಬಂಟ್ವಾಳ ವಲಯ ಅರಣ್ಯಾಧಿಕಾರಿ ರಾಜೇಶ್ ಬಳಿಗಾರ್ ಹಾಗೂ ಸಿಬ್ಬಂದಿಗಳು ಉಪಸ್ಥಿತಿದ್ದರು.