ಬಂಟ್ವಾಳ : ಕಷ್ಟ ಬಂದಾಗ ನೆರವಾಗುವವರು ಆಪತ್ಭಾಂಧವ ಎನ್ನಿಸಿಕೊಳ್ಳುತ್ತಾರೆ. ಸೂರಿಕುಮೇರುವಿನಲ್ಲಿ ಮಂಗಳವಾರ ಮುಂಜಾನೆ ಗ್ಯಾಸ್ ಟ್ಯಾಂಕರ್ ಮಗುಚಿ ಬಿದ್ದ ಸಂದರ್ಭದಲ್ಲೂ ಜಾತಿ ಮತ ಮರೆತು ಸೂರಿಕುಮೇರು ಪರಿಸರದ ಜನತೆ ಮೆರೆದ ಮಾನವೀಯತೆ ನಿಜಕ್ಕೂ ಪ್ರಶಂಸನೀಯ.
ಇಲ್ಲಿನ ಕಥೊಲಿಕ್ ಸಭಾ ಸೂರಿಕುಮೇರು ಬೊರಿಮಾರ್ ಘಟಕದ ಅಧ್ಯಕ್ಷ ಸ್ಟೀವನ್ ಪ್ರಕಾಶ್ ಮಾರ್ಟಿಸ್, ಸೂರಿಕುಮೇರು ಸೈಂಟ್ ಜೋಸೆಫ್ ಚರ್ಚ್ ನ ಸಮಿತಿಯ ಸಂಯೋಜಕ ಆಲ್ವಿನ್ ಪಾಯ್ಸ್, ಕಿಶೋರ್ ಸಂತೋಷ್ ಪಿಂಟೊ ಮತ್ತು ಮಾಣಿ ಗ್ರಾಮ ಪಂಚಾಯತ್ ನೂತನ ಸದಸ್ಯ ಮೆಲ್ವಿನ್ ಕಿಶೋರ್ ಮಾರ್ಟಿಸ್ ರವರು ಕೂಡ ಇದೇ ಆಪತ್ಬಾಂಧವರ ಸಾಲಿಗೆ ಸೇರಿದವರು. ಟ್ಯಾಂಕರ್ ಬಿದ್ದ ವಿಚಾರ ತಿಳಿಯುತ್ತಲೇ ಒಂದೆಡೆ ಮಸೀದಿಯ ಧ್ವನಿವರ್ಧಕ ದ ಮೂಲಕ ಎಲ್ಲರೂ ಜಾಗ್ರತೆಯಿಂದ ಇರುವಂತೆ ಸೂಚಿಸಿದರೆ, ಇತ್ತ ಸೂರಿಕುಮೇರು ಸೈಂಟ್ ಜೋಸೆಫ್ ಚರ್ಚ್ ವ್ಯಾಪ್ತಿಯಲ್ಲೂ ವಿಶೇಷ ಮುನ್ನೆಚ್ಚರಿಕೆ ವಹಿಸಲು ಸೂಚಿಸಲಾಯಿತು. ಸ್ಟೀವನ್ ಪ್ರಕಾಶ್ ಮಾರ್ಟಿಸ್, ಅಲ್ವಿನ್ ಪಾಯ್ಸ್, ಕಿಶೋರ್ ಸಂತೋಷ್ ಪಿಂಟೋ ಹಾಗೂ ಮೆಲ್ವಿನ್ ಕಿಶೋರ್ ಮಾರ್ಟಿಸ್ ರವರೂ ಸ್ಥಳೀಯವಾಗಿ ಮನೆಮನೆಗೂ ಜಾಗೃತಿ ಸಂದೇಶ ತಲುಪಿಸಿದರಲ್ಲದೆ, ಶಾಲಾ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳಿಗೂ ಸಮಸ್ಯೆಯಾಗದ ರೀತಿಯಲ್ಲಿ ಮಾರ್ಗದರ್ಶನ ನೀಡಿದರು. ಜೊತೆಗೆ ಟ್ಯಾಂಕರ್ ತೆರವು ಕಾರ್ಯಾಚರಣೆ ನಡೆಸುತ್ತಿದ್ದ ಪೊಲೀಸರಿಗೆ, ಅಗ್ನಿಶಾಮಕ ಅಧಿಕಾರಿಗಳಿಗೆ ವಿಶೇಷ ಸಾಥ್ ನೀಡಿದರು. ಇವರ ಈ ಕಾರ್ಯ ಸೂರಿಕುಮೇರು ಸೈಂಟ್ ಜೋಸೆಫ್ ಚರ್ಚ್ ಸಮಿತಿಯಿಂದಲೂ ಶ್ಲಾಘನೆಗೆ ಪಾತ್ರವಾಗಿದ್ದು, ಚರ್ಚ್‌ನ ಧರ್ಮಗುರು ವಂದನೀಯ ಫಾದರ್ ಗ್ರೆಗರಿ ಪಿರೇರಾ, ಉಪಾಧ್ಯಕ್ಷ ಎಲಿಯಾಸ್ ಮತ್ತು ಕಾರ್ಯದರ್ಶಿ ಮೇರಿ ಡಿಸೋಜ ತುಂಬು ಹೃದಯದಿಂದ ಅಭಿನಂದಿಸಿದ್ದಾರೆ.