ಮೌನೇಶ ವಿಶ್ವಕರ್ಮ
ಬಂಟ್ವಾಳ : ಕೋವಿಡ್ ಕಾಲದಲ್ಲಿ ಜಾಲತಾಣಗಳಲ್ಲಿ ಸಾಹಿತ್ಯ ಕೇಕೆ ಹಾಕಿದ್ದರೂ, ಅದರಲ್ಲಿನ ಒಳಿತು ಹಾಗೂ ಕೆಡುಕುಗಳ ಕುರಿತಾಗಿ ಪ್ರಜ್ಞಾವಂತರು ಪುನರ್ವಿಮರ್ಶೆ ಅಗತ್ಯವಿದೆ ಎಂದು ಬಂಟ್ವಾಳ ತಾಲೂಕು 21 ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ, ಸಾಹಿತಿ ಡಾ.ಸುರೇಶ ನೆಗಳಗುಳಿ ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತು ಬಂಟ್ವಾಳ, ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತು ಇದರ ಸಂಯುಕ್ತ ಆಶ್ರಯದಲ್ಲಿ ಬಿ.ಸಿ.ರೋಡು ಕೈಕುಂಜೆಯ ಕನ್ನಡ ಭವನ ವಠಾರದಲ್ಲಿ ಭಾನುವಾರ ನಡೆದ ಬಂಟ್ವಾಳ ತಾಲೂಕು 21ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕೋವಿಡ್ ಮಹಮಾರಿ ಆಗಮನವಾದಾಗ ಸಾಹಿತ್ಯಕ್ಕೆ ಜಾಲತಾಣಗಳು ಮಾತ್ರ ವೇದಿಕೆಯಾಗಿದ್ದು, ಹಲವು ಸಾಕ್ಷರರನ್ನು ಸಾಹಿತ್ಯದ ಕಡೆಗೆ ಸೆಳೆದುಕೊಂಡಿದ್ದು, ಹೊಸ ಪ್ರಕಾರಗಳ ಅವಿಷ್ಕಾರಕ್ಕೂ ಕಾರಣವಾಗಿದೆ, ಆದರೆ ಸಾಹಿತ್ಯದ ಆಳಕ್ಕೆ ಇಳಿಯದೇ ಕೆಲವು ಸನ್ನಿವೇಶಗಳಲ್ಲಿ ಜ್ಞಾನವಿಲ್ಲದವರು ಸಾಹಿತ್ಯದ ಮೌಲ್ಯಮಾಪನ ಮಾಡುವಂತಾಗಿರುವುದು ವಿಷಾಧನೀಯ ಎಂದರು.
ಪತ್ರಿಕೋದ್ಯಮದ ಒಳಗೆ ಸಾಹಿತ್ಯ ಸಂಚರಿಸಿದಾಗ ಸಾಹಿತ್ಯಕ್ಕೆ ಪಕ್ವತೆ ಬರಲು ಸಾಧ್ಯ ಎಂದ ಅವರು ಪತ್ರಿಕೋದ್ಯಮದಲ್ಲೂ ಪಕ್ವ ಸಾಹಿತಿಗಳು ಬೇಕು, ಕನ್ನಡದ ಸತ್ವವನ್ನು ಉಳಿಸಿಕೊಂಡೇ ಸಾಹಿತ್ಯದ ರಚಿಸುವತ್ತ ಸಾಹಿತಿಗಳು ಹೆಚ್ಚು ಗಮನಹರಿಸಬೇಕಿದೆ ಎಂದರು. ಕಾಸರಗೋಡಿನಲ್ಲಿ ನಡೆಯುತ್ತಿರುವಂತಹಾ ಕನ್ನಡ ಪರ ಕೆಲಸಗಳು ಕರ್ನಾಟಕದಲ್ಲಿ ನಡೆಯದೇ ಇರುವುದು ದುರದೃಷ್ಟಕರ ಎಂದ ಅವರು, ಗಡಿನಾಡ ಸಾಹಿತ್ಯ ದ ಬಗ್ಗೆಯೂ ಸರ್ಕಾರ ಗಮನಹರಿಸಬೇಕೆಂದರು.
ಹಣಕೊಟ್ಟು ಪಡೆಯುವ ಡಾಕ್ಟರೇಟ್ ಸಲ್ಲದು, ಪಠ್ಯದಲ್ಲಿ ಕನ್ನಡ ಸಾಹಿತ್ಯ ಮೇಳೈಸಲಿ, ಪ್ರತೀ ತಾಲೂಕಿನಲ್ಲಿ ಕನ್ನಡ ಭವನ ನಿರ್ಮಾಣಗೊಳ್ಳಲಿ ಎಂದ ಅವರು, ಭಾಷಾ ಪ್ರೇಮಕ್ಕೆ ಸಂಬಂಧಿಸಿ ಕೇರಳ ಕರ್ನಾಟಕಕ್ಕೆ ಮಾದರಿಯಾಗಿದ್ದು ಕನ್ನಡ ಭಾಷೆಯ ಬೆಳವಣಿಗೆಯ ಕಾರ್ಯ ಹೆಚ್ಚುಹೆಚ್ಚು ನಡೆಯಬೇಕಾಗಿದೆ.
ತಾಲೂಕು ತಹಶೀಲ್ದಾರ್ ರಶ್ಮೀ ಎಸ್.ಆರ್ ಸಮ್ಮೇಳನ ಉದ್ಘಾಟಿಸಿದರು.
ನಿಕಟಪೂರ್ವ ಸಮ್ಮೇಳನಾಧ್ಯಕ್ಷೆ ಡಾ.ಧರಣೀದೇವಿ ಮಾಲಗತ್ತಿ ಮಾತನಾಡಿ, ಯಕ್ಷಗಾನದ ಪ್ರತಿಯೊಂದು ಪ್ರಸಂಗವೂ ಮಹಾಕಾವ್ಯಗಳಾಗಿದ್ದು, ದಕ್ಷಿಣ ಕನ್ನಡದಲ್ಲಿ ಮಾತ್ರ ಅಲ್ಲ, ಎಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿಯೂ ಯಕ್ಷಗಾನಕ್ಕೆ ಪ್ರಾಧಾನ್ಯತೆ ಸಿಗಬೇಕು ಎಂದರು. ಕೋವಿಡ್ 19 ಸಕಲ ಮಾನವ ಸಮೂಹಕ್ಕೆ ಒಳ್ಳೆಯ ಪಾಠವನ್ನು ಕಲಿಸಿದ್ದು, ಸಂವಿಧಾನ ಸೂಚಿಸಿದಂತೆಯೇ ನಿರ್ಬಂಧಿತ ಸ್ವಾತಂತ್ರ್ಯದ ಬದುಕಿನಲ್ಲಿಯೇ ಸೌಹಾರ್ದದ ಜೀವನ ಕಟ್ಟಿಕೊಳ್ಳುವುದು ಇಂದಿನ ಅಗತ್ಯ ಎಂದವರು ಅಭಿಪ್ರಾಯಪಟ್ಟರು.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಶುಭಹಾರೈಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಪ್ರದೀಪ ಕುಮಾರ ಕಲ್ಕೂರ ಆಶಯ ಮಾತುಗಳನ್ನಾಡಿದರು.
ನಿವೇದನೆ ಎಂಬ ಸ್ಮರಣ ಸಂಚಿಕೆಯನ್ನು ತುಳು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಎ.ಸಿ.ಭಂಡಾರಿ ಬಿಡುಗಡೆಗೊಳಿಸಿದರು.
ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಡಾ.ಗಿರೀಶ್ ಭಟ್ ಅಜಕ್ಕಳ,
ತಾಲೂಕು ಪಂಚಾಯತ್ ಉಪಾಧ್ಯಕ್ಷ ಅಬ್ಬಾಸ್ ಅಲಿ, ಗೌರವ ಕಾರ್ಯದರ್ಶಿ ಡಾ.ನಾಗವೇಣಿ ಮಂಚಿ, ರವೀಂದ್ರ ಕುಕ್ಕಾಜೆ ವೇದಿಕೆಯಲ್ಲಿದ್ದರು.
ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಅಧ್ಯಕ್ಷ ಕೆ.ಮೋಹನ ರಾವ್ ಸ್ವಾಗತಿಸಿದರು. ನಿಕಟಪೂರ್ವ ಅಧ್ಯಕ್ಷ ಜಯಾನಂದ ಪೆರಾಜೆ ಸಮ್ಮೇಳನಾಧ್ಯಕ್ಷರನ್ನು ಪರಿಚಯಿಸಿದರು.
ಬೆಸ್ಟ್ ಆಂಗ್ಲಮಾಧ್ಯಮ ಶಾಲೆಯ ಶಿಕ್ಷಕರು ನಾಡಗೀತೆ, ರೈತಗೀತೆ ಹಾಡಿದರು.ಕೊಡಾಜೆ ಬಾಲಕೃಷ್ಣ ಆಳ್ವ, ಶಿಕ್ಷಕ ಮಹೇಶ್ ವಿ.ಕರ್ಕೇರ ಕಾರ್ಯಕ್ರಮ ರೂಪಿಸಿದರು. ಗೀತಾ ಕೋಂಕೋಡಿ, ರವಿಕುಮಾರ್ ನಿರ್ವಹಿಸಿದರು. ಪಲ್ಲವಿ ಕಾರಂತ ವಂದಿಸಿದರು.