ಬಂಟ್ವಾಳ: ಸಜೀಪನಡು ಗ್ರಾಮ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆ ಪ್ರಕ್ರಿಯೆ ಬುಧವಾರ ನಡೆದಿದ್ದು ಪಂಚಾಯತ್ ನ ನೂತನ ಅಧ್ಯಕ್ಷೆಯಾಗಿ ಎಸ್ ಡಿಪಿಐ ಬೆಂಬಲಿತ ಅಭ್ಯರ್ಥಿ ಫೌಝಿಯಾ ಬಾನು, ಉಪಾಧ್ಯಕ್ಷರಾಗಿ ಅಬ್ದುರ್ರಹ್ಮಾನ್ ಎಸ್.ಎನ್. ಆಯ್ಕೆಯಾಗಿದ್ದಾರೆ.
ಸಜೀಪನಡು ಗ್ರಾಮ ಪಂಚಾಯತ್ ನಲ್ಲಿ ಒಟ್ಟು 15 ಸದಸ್ಯ ಸ್ಥಾನಗಳಿದ್ದು ಅದರಲ್ಲಿ ಎಸ್ ಡಿಪಿಐ ಬೆಂಬಲಿತ 8, ಕಾಂಗ್ರೆಸ್ ಬೆಂಬಲಿತ 4, ಬಿಜೆಪಿ ಬೆಂಬಲಿತ 3 ಸದಸ್ಯರು ಗೆದ್ದಿದ್ದರು.
ಅಧ್ಯಕ್ಷೆ ಸ್ಥಾನಕ್ಕೆ ಎಸ್ ಡಿಪಿಐ ಬೆಂಬಲಿತ ಅಭ್ಯರ್ಥಿಯಾಗಿ ಫೌಝಿಯಾ ಬಾನು, ಉಪಾಧ್ಯಕ್ಷ ಸ್ಥಾನಕ್ಕೆ ಅಬ್ದುರ್ರಹ್ಮಾನ್ ಎಸ್.ಎನ್., ಕಾಂಗ್ರೆಸ್ ಬೆಂಬಲಿತ ಸದಸ್ಯರಲ್ಲಿ ಅಧ್ಯಕ್ಷ ಸ್ಥಾನಕ್ಕೆ ಜಯಂತಿ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಅಬ್ದುಲ್ ಲತೀಫ್ ನಾಮಪತ್ರ ಸಲ್ಲಿಸಿದ್ದರು. ಬಿಜೆಪಿ ಬೆಂಬಲಿತರಿಂದ ಅಧ್ಯಕ್ಷ ಸ್ಥಾನಕ್ಕೆ ಸೆಲಿಕಾ ಬಾನು ನಾಮಪತ್ರ ಸಲ್ಲಿಸಿದರೆ ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾದ ಅಭ್ಯರ್ಥಿ ಬಿಜೆಪಿ ಬೆಂಬಲಿತರಲ್ಲಿ ಇಲ್ಲದ ಕಾರಣ ನಾಮಪತ್ರ ಸಲ್ಲಿಸಿರಲಿಲ್ಲ.
ಬಳಿಕ ನಡೆದ ಮತದಾನ ಪ್ರಕ್ರಿಯಲ್ಲಿ ಎಸ್.ಡಿಪಿಐ ಬೆಂಬಲಿತ ಅಭ್ಯರ್ಥಿಗಳು ತಲಾ 8 ಮತಗಳನ್ನು ಪಡೆದರೆ, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ತಲಾ 4 ಹಾಗೂ ಬಿಜೆಪಿಯ ಅಭ್ಯರ್ಥಿ 3 ಮತಗಳನ್ನು ಪಡೆದರು. ಚುನಾವಣಾ ಅಧಿಕಾರಿಯಾಗಿದ್ದ ಲೋಕೋಪಯೋಗಿ ಇಲಾಖೆಯ ಮುಖ್ಯ ಕಾರ್ಯ ನಿರ್ವಹಣಾ ಅಭಿಯಂತರ ಶನ್ಮುಗಂ ಅವರು ತಲಾ 8 ಮತಗಳನ್ನು ಪಡೆದ ಫೌಝಿಯಾ ಬಾನು ಮತ್ತು ಅಬ್ದುರ್ರಹ್ಮಾನ್ ಅವರ ಗೆಲುವನ್ನು ಘೋಷಿಸಿದರು.
ನೂತನ ಅಧ್ಯಕ್ಷೆ, ಉಪಾಧ್ಯಕ್ಷರಿಗೆ ಸಜಿಪನಡು ಗ್ರಾಪಂ ಮಾಜಿ ಅಧ್ಯಕ್ಷ ಮುಹಮ್ಮದ್ ನಾಸಿರ್, ಎಸ್.ಡಿಪಿಐ ರಾಷ್ಟ್ರೀಯ ಕಾರ್ಯದರ್ಶಿ ಅಲ್ಫಾನ್ಸೋ ಫ್ರಾಂಕೋ, ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ, ಪ್ರಮುಖರಾದ ಅಶ್ರಫ್ ಮಂಚಿ, ಶಾಹುಲ್ ಹಮೀದ್ ಎಸ್.ಎಚ್., ಅಬ್ಬಾಸ್ ಕಿನ್ಯ, ಮುಹಮ್ಮದ್ ನವಾಝ್ ಸಜಿಪ, ನೌರೀಶ್ ಸಜಿಪ, ನೌಶಾದ್ ಸಜಿಪ, ಗ್ರಾಪಂ ಸದಸ್ಯರು, ಗ್ರಾಮದ ಹಿರಿಯರು ಶುಭ ಹಾರೈಸಿದರು.