Tuesday, October 31, 2023

ಪೊಳಲಿಯಲ್ಲಿ ವಿಶೇಷ ಪೂಜೆ, ಯಾಗ, ಹವನಾದಿಗಳು

Must read

ಪೊಳಲಿ : ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಫೆ. 13ರಿಂದ ಕಲಶಾಭಿಷೇಕ ಪ್ರಯುಕ್ತ ವಿಶೇಷ ಪೂಜೆ, ಯಾಗ, ಹವನಾದಿಗಳು ನಡೆಯುತ್ತಿದ್ದು, ಫೆ. 20ರಂದು ಕಲಶಾಭಿಷೇಕ ಹಾಗೂ ಫೆ. 21ರಂದು ಪೂಜಾ ವಿಧಿ-ವಿಧಾನ ಸಂಪನ್ನಗೊಳ್ಳಲಿದೆ. ಅಲ್ಲಿಯವರೆಗೆ ಇಲ್ಲಿ ಭಕ್ತಾದಿಗಳ ಸೇವೆ, ಪೂಜೆಗಳು ನಡೆಯುವುದಿಲ್ಲ.


ದೇವಳದಲ್ಲಿ ಈಗ ನಿರಂತರ ಶುದ್ಧೀಕರಣ ವಿಶೇಷ ಪೂಜೆಗಳು ನಡೆಯುತ್ತಿವೆ. ಕಳೆದ ಎರಡು ದಿನಗಳಿಂದ ದೇವಳಕ್ಕೆ ಆಗಮಿಸುತ್ತಿರುವ ಭಕ್ತರ ಸಂಖ್ಯೆ ಇಮ್ಮಡಿಗೊಳ್ಳುತ್ತಿದೆ. ದೇವಸ್ಥಾನದ ಚೆಂಡಿನ ಗದ್ದೆಯಲ್ಲಿ ಬೃಹತ್ ಚಪ್ಪರ ಹಾಕಲಾಗಿದ್ದು, ಏಕಕಾಲದಲ್ಲಿ ನೂರಾರು ಮಂದಿ ಅನ್ನ ಪ್ರಸಾದ ಸ್ವೀಕರಿಸುತ್ತಿದ್ದಾರೆ. ಪಕ್ಕದಲ್ಲೇ ಅನ್ನಛತ್ರ, ಅಲ್ಲಿ ಗರಿಷ್ಠ ಬಾಣಸಿಗರು ಅಡುಗೆಯಲ್ಲಿ ನಿರತರಾಗಿದ್ದಾರೆ.
ಒಂದೆಡೆ ಕಾರ್ಯಕರ್ತರು ತರಕಾರಿ ಹೆಚ್ಚುತ್ತಿದ್ದರೆ, ಮತ್ತೆ ಕೆಲವರು ತರಕಾರಿ ಹಾಗೂ ಇತರ ಖಾದ್ಯ ಸೊತ್ತು ವಿಂಗಡಿಸುತ್ತಿದ್ದಾರೆ. ಉಗ್ರಾಣದಲ್ಲಿ ತರಕಾರಿ, ಎಣ್ಣೆ, ಅಕ್ಕಿ, ಬೆಲ್ಲ, ನೀರು, ಎಲೆ, ಸೀಯಾಳ ಇನ್ನಿತ ಸೊತ್ತುಗಳು ರಾಶಿ ಬಿದ್ದಿವೆ. ಅನ್ನಛತ್ರಕ್ಕೆ ಅಗತ್ಯವಿರುವ ತೆಂಗಿನ ಸೋಗೆಯನ್ನು ಹೆಂಗಳೆಯರು ಅಂದವಾಗಿ ಹೆಣೆಯುತ್ತಿದ್ದಾರೆ. ಲಕ್ಷಾಂತರ ಮಂದಿ ಸೇರಿದ್ದ ಪೊಳಲಿ ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ದೇವಳದ ಸ್ವಚ್ಛತೆಗೆ ಕಾರಣೀಭೂತರಾಗಿದ್ದ ಸ್ವಯಂ-ಸೇವಕರು ಈ ಬಾರಿಯೂ ಅನ್ನಛತ್ರ, ದೇವಳದ ಸುತ್ತಮುತ್ತ ಸ್ವಚ್ಚತೆ ಒತ್ತು ನೀಡಿದ್ದಾರೆ.
ಫೆ. 20ರಂದು ನಡೆಯಲಿರುವ ಕಲಶಾಭಿಷೇಕಕ್ಕೆ ದೇವಳವು ಮದುವಣಗಿತ್ತಿಯಂತೆ ಸಂಪೂರ್ಣ ಹೂವು ಹಾಗೂ ವಿದ್ಯುತ್ ದೀಪಗಳಿಂದ ಸರ್ವಾಲಂಕೃತವಾಗಿದೆ. ಎಲ್ಲೆಡೆ ನೋಡಿದರೂ ಹಬ್ಬದ ವಾತಾವರಣ ಸೃಷ್ಟಿಯಾಗಿದೆ.

More articles

Latest article