Saturday, April 6, 2024

ನಿಮ್ಮೊಂದಿಗೆ ನಾವಿದ್ದೇವೆ: ಶಾಸಕ ಮಠಂದೂರು

ಮಂಗಳೂರು: ಮಂಗಳೂರಿನಲ್ಲಿ ಸ್ವಂತ ಕಟ್ಟಡ ಹೊಂದಿರುವ ಜಿಲ್ಲಾ ಗೃಹರಕ್ಷಕ ದಳದ ಪುತ್ತೂರು ಘಟಕಕ್ಕೆ ಮತ್ತು ಜಿಲ್ಲೆಯ ಉಳಿದ 14 ಘಟಕಗಳಿಗೆ ಜಿಲ್ಲೆಯ ಬೇರೆಲ್ಲೂ ಸ್ವಂತ ಕಛೇರಿ ಇಲ್ಲ. ಘಟಕಗಳಿಗೆ ಬಾಡಿಗೆ ಕಟ್ಟಡದಲ್ಲಿ ಇರಲು ಇಲಾಖೆಯಿಂದ ಅನುದಾನ ಇಲ್ಲ. ಇಂತಹ ಸಂದರ್ಭದಲ್ಲಿ ಪುತ್ತೂರಿನ ಜನಪ್ರಿಯ ವೈದ್ಯ ಡಾ|| ಎಂ. ಕೆ. ಪ್ರಸಾದ್ ಆವರು ಮುಂದೆ ಬಂದು ಕಟ್ಟಡಕ್ಕೆ ಠೇವಣಿ ಮತ್ತು ಬಾಡಿಗೆಯನ್ನು ನೀಡುವ ಮೂಲಕ ಹಾರಾಡಿಯಲ್ಲಿ ಜನವರಿ 31 ರಂದು ಜಿಲ್ಲಾ ಗೃಹರಕ್ಷಕದಳ ಪುತ್ತೂರು ಘಟಕದ ನೂತನ ಕಛೇರಿ ಉದ್ಘಾಟಿಸಿದರು.

ಶಾಸಕ ಸಂಜೀವ ಮಠಂದೂರು ಅವರು ನೂತನ ಕಛೇರಿಯಲ್ಲಿ ದೀಪ ಜ್ವಲಿಸಿ ಮಾತನಾಡಿ ಪೊಲೀಸ್, ಅಗ್ನಿಶಾಮಕ, ಆರ್‌ಟಿಓ ಸೇರಿದಂತೆ ಜನರ ರಕ್ಷಣೆ ಮಾಡುವ ಹಾಗೂ ಯೋಗಕ್ಷೇಮ ನೋಡುವ ಇಲಾಖೆಯ ಎಲ್ಲಾ ಸೇವೆಗಳನ್ನು ಗೃಹರಕ್ಷಕ ದಳದವರು ಮಾಡುತ್ತಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಪೊಲೀಸರಷ್ಟೇ ಮಾಡಿದವರು ಗೃಹರಕ್ಷಕ ದಳದವರು. ಆದರೆ ಅನಿಶ್ಚಿತತೆಯ ಸೇವೆಯಲ್ಲಿ ಇರುವ ನಿಮ್ಮ ಬದುಕು ಅನಿಶ್ಚಿತತೆಯಲ್ಲಿ ಇರಬಾರದು ಎಂದು ನಿಮಗೆ ಭದ್ರತೆ ಕೊಡುವ ಕೆಲಸವನ್ನು ಡಾ|| ಎಂ.ಕೆ. ಪ್ರಸಾದ್ ಮಾಡಿದ್ದಾರೆ. ಮುಂದಿನ ದಿನ ಪೊಲೀಸ್ ಇಲಾಖೆಯಲ್ಲಿರುವಂತಹ ವ್ಯವಸ್ಥೆ ನಿಮಗೂ ಸಿಗುವಂತೆ ಮಂತ್ರಿಗಳಲ್ಲಿ ಮಾತನಾಡಿ ಸರಿಪಡಿಸುತ್ತೇನೆ. ಸ್ವಂತ ಕಛೆರಿ ಇರಬಹುದು ಅಥವಾ ಬಾಡಿಗೆ ಕುರಿತು ಪ್ರಸ್ತಾವನೆ ಸಲ್ಲಿಸುತ್ತೇನೆ. ನಿಮ್ಮ ಇಲಾಖೆಗೆ ಅರ್ಧ ಎಕರೆ ಜಾಗವನ್ನಾದರೂ ನೋಡುವ ಕೆಲಸ ಕಾರ್ಯ ಆರಂಭಿಸುತ್ತೇನೆ. ಪುತ್ತೂರಿಗೆ ಎಸ್‌ಪಿ ಕಛೇರಿ ಬರುವ ಹಿನ್ನೆಲೆಯಲ್ಲಿ ಅದರ ಸಮೀಪವೇ ನಿಮಗೆ ಜಾಗ ಕಾದಿರಿಸುವ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿ ನಿಮ್ಮೊಂದಿಗೆ ನಾವಿದ್ದೇವೆ. ನಿಮ್ಮ ಸೇವೆ ಜನರಿಗೆ ಸಿಗಲಿ ಎಂದರು.


ಕಛೇರಿ ಉದ್ಘಾಟಿಸಿದ ಆದರ್ಶ ಆಸ್ಪತ್ರೆಯ ಡಾ|| ಎಂ.ಕೆ. ಪ್ರಸಾದ್ ಅವರು ಮಾತನಾಡಿ ಸಂಬಳದ ಆಸೆ ಇಲ್ಲದೆ ಸೇವಾ ಮನೋಭಾವನೆಯಿಂದ ಕರ್ತವ್ಯ ನಿರ್ವಹಿಸುವ ಗೃಹರಕ್ಷಕ ದಳ ಸಮಾಜದಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆ. ನಿಮಗೆ ತಿಂಗಳು ಪೂರ್ತಿ ಸಂಬಳ ಸಿಗುವ ವ್ಯವಸ್ಥೆ ಆಗಬೇಕು. ಸರಕಾರ ತನ್ನ ಪ್ರಚಾರಾರ್ಥ ನೀಡುವ ಜಾಹೀತಾರಿಗೆ ವೆಚ್ಚ ಮಾಡುವ ಬದಲು ಗೃಹರಕ್ಷಕ ದಳದವರಿಗೆ ಸ್ವಂತ ಕಟ್ಟಡ ಮಾಡಿಸಿಕೊಡುವ ಮತ್ತು ಅವರ ವೇತನದ ಚಿಂತನೆ ಮಾಡಬೇಕು ಎಂದರು. ಪುತ್ತೂರಿನ ಗೃಹರಕ್ಷಕ ದಳ ಕಛೇರಿಗೆ ನಿವೇಶನ ಸಿಗುವುದಾದರೆ ಅದು ನಗರ ಕೇಂದ್ರ ಸ್ಥಾನದಲ್ಲೇ ಸಿಗಬೇಕು. ಪ್ರಸ್ತುತ ಕಛೇರಿಗೆ ಏನೆಲ್ಲಾ ವ್ಯವಸ್ಥೆ ಬೇಕು ಅದನ್ನೇ ಪೂರೈಸುತ್ತೇನೆ ಎಂದು ಅವರು ಭರವಸೆ ನೀಡಿದರು. ಗೃಹರಕ್ಷಕ ದಳದ ಜಿಲ್ಲಾ ಕಮಾಂಡೆಂಟ್ ಡಾ|| ಮುರಲೀ ಮೋಹನ್ ಚೂಂತಾರು ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸಮಾಜದ ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಗೃಹರಕ್ಷಕ ದಳದವರ ಪಾಲು ಬಹುದೊಡ್ಡದಿದೆ. ಭಾರತದಲ್ಲಿ ೬ ಲಕ್ಷ ಗೃಹರಕ್ಷಕ ದಳದವರಿಗೆ ಜಿಲ್ಲೆಯಲ್ಲಿ ಒಂದು ಸಾವಿರ ಮಂದಿ ಮತ್ತು ಪುತ್ತೂರಿನಲ್ಲಿ 73 ಮಂದಿ ಗೃಹರಕ್ಷಕ ಸಿಬ್ಬಂದಿಗಳಿದ್ದಾರೆ. ಪುತ್ತೂರಿನ ಗೃಹರಕ್ಷಕ ದಳಕ್ಕೆ ೫೦ ವರ್ಷಗಳ ಇತಿಹಾಸ ಇದೆ. ಆದರೆ ಸ್ವಂತ ಕಟ್ಟಡ ಇಲ್ಲದ್ದು ಕೊರತೆ ಇದೆ. ಬೇರೆ ಬೇರೆ ತಾಲೂಕಿನಲ್ಲಿ ಪೊಲೀಸ್ ಠಾಣೆಯ ಹಳೇ ಕಛೇರಿ ಅಥವಾ ಪೊಲೀಸ್ ಠಾಣೆಯ ಒಂದು ಕೊಠಡಿಯನ್ನು ಗೃಹರಕ್ಷಕ ದಳಕ್ಕೆ ಕೊಟ್ಟಿದ್ದಾರೆ. ಪುತ್ತೂರಿನಲ್ಲಿ ಮಾತ್ರ ಕೊಠಡಿ ಕೊರತೆ ಎದುರಿಸುತ್ತಿದ್ದೆವು. ಇವತ್ತು ದಾನಿಗಳ ರೂಪದಲ್ಲಿ ಡಾ|| ಎಂ.ಕೆ. ಪ್ರಸಾದ್ ಅವರು ಕೊಠಡಿ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ ಎಂದು ಹೇಳಿದರಲ್ಲದೆ, ಮುಂದೆ ನಮಗೆ ಸ್ವಂತ ನಿವೇಶನ ಕೊಡಿಸುವಂತೆ ಶಾಸಕರಲ್ಲಿ ಮನವಿ ಮಾಡಿದರು. ಆಯುಷ್ ಫೆಡರೇಷನ್ ಇಂಡಿಯಾದ ಜಿಲ್ಲಾ ಅಧ್ಯಕ್ಷ ಡಾ|| ಸತ್ಯನಾರಾಯಣ ಅಸ್ತ ಅವರು ಶುಭ ಹಾರೈಸಿದರು.
ಗೃಹರಕ್ಷಕ ದಳಕ್ಕೆ ಕಾರಣಕರ್ತರಾದ ರಾಮ್‌ದಾಸ್ ಹಾರಾಡಿ ಮತ್ತು ಕಟ್ಟಡದ ಕೊಠಡಿಗೆ ಠೇವಣಿ ಮತ್ತು ಬಾಡಿಗೆಗೆ ಠೇವಣಿ ಮತ್ತು ಬಾಡಿಗೆಯನ್ನು ನೀಡಿ ಸಹಕರಿಸಿದ ಡಾ|| ಎಂ.ಕೆ. ಪ್ರಸಾದ್ ಮುಂದಿನ ದಿನ ಕಛೇರಿಗೆ ಜಾಗ ಕಾದಿರಿಸುವ ಭರವಸೆ ವ್ಯಕ್ತಪಡಿಸುವ ಶಾಸಕ ಸಂಜೀವ ಮಠಂದೂರು ಮತ್ತು ಸಂಸ್ಥೆಗೆ ಕಪಾಟು ಕೊಡುಗೆಯಾಗಿ ನೀಡಿದ ಉದ್ಯಮಿ ರಜಾಕ್ ಬಪ್ಪಳಿಗೆ ಅವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಗೃಹರಕ್ಷಕ ದಳದ ಜಿಲ್ಲಾ ಡೆಪ್ಯುಟಿ ಕಮಾಂಡೆಂಟ್ ರಮೇಶ್ ಪೂಜಾರಿ, ಪುತ್ತೂರು ಘಟಕದ ಘಟಕಾಧಿಕಾರಿ ಅಭಿಮನ್ಯು ಉಪಸ್ಥಿತರಿದ್ದರು. ಕಟ್ಟಡದ ಮಾಲಕ ದಿನೇಶ್ ಬಲ್ಲಾಳ್ ಸಭೆಯಲ್ಲಿ ಉಪಸ್ಥಿತರಿದ್ದರು. ಗೃಹರಕ್ಷಕ ದಳದ ಸಿಬ್ಬಂದಿಗಳಾದ ಜಗನ್ನಾಥ್, ಸಯ್ಯದ್ ಇಬ್ರಾಹಿಂ, ವಿಠಲ್ ನಾಯ್ಕ, ಅಶೋಕ್ ಚಿದಂಬರ್, ಅಬ್ದುಲ್ ಸಲೀಂ ಅತಿಥಿಗಳನ್ನು ಗೌರವಿಸಿದರು. ಧನುಷ್ ಪ್ರಾರ್ಥಿಸಿದರು. ಸಂತೋಷ್ ಜೆ.ಪಿ. ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

More from the blog

ಕೊಳವೆ ಬಾವಿಗೆ ಬಿದ್ದ 2 ವರ್ಷದ ಕಂದಮ್ಮ : ರಕ್ಷಣೆಗೆ ಅರ್ಧ ಅಡಿಯಷ್ಟೇ ಬಾಕಿ

ವಿಜಯಪುರ: ಕೊಳವೆ ಬಾವಿಗೆ ಬಿದ್ದಿರುವ ಮಗು ಸಾತ್ವಿಕ ಸುರಕ್ಷಿತವಾಗಿದ್ದು, ರಕ್ಷಣಾ ಕಾರ್ಯಾಚರಣೆ ಅಂತಿಮ ಹಂತಕ್ಕೆ ಬಂದಿದೆ. ಮಗು ಸುರಕ್ಷಿತವಾಗಿದ್ದು, ಕಾರ್ಯಾಚರಣೆ ಆಶಾದಾಯಕವಾಗಿದೆ. 16 ಅಡಿ ಆಳದಲ್ಲಿರುವ ಸಾತ್ವಿಕ್ ರಕ್ಷಣೆಗಾಗಿ 22 ಅಡಿ ಆಳದವರೆಗೆ ಸುರಂಗ...

ಮಿತಿ ಮೀರಿದ ತಾಪಮಾನ : ಖಡಕ್​ ಎಚ್ಚರಿಕೆ ಕೊಟ್ಟ ಹವಾಮಾನ ಇಲಾಖೆ

ಬೆಂಗಳೂರು: ರಾಜ್ಯದಲ್ಲಿ ಬಿರು ಬಿಸಿಲು ಹೆಚ್ಚಳವಾಗುತ್ತಿದ್ದು ಮುಂದಿನ 14 ದಿನಗಳ ಕಾಲ ಬಿಸಿಗಾಳಿ ಬೀಸಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿಗಾ ಕೇಂದ್ರ (KSNDMC) ಮುನ್ಸೂಚನೆ ನೀಡಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಏಪ್ರಿಲ್​...

ಮನೆಯ ಮಹಡಿಯಿಂದ ಬಿದ್ದು ಬಾಲಕ ಸಾವು

ಬಂಟ್ವಾಳ: ಮನೆಯ ಮಹಡಿಯ ಮೇಲಿಂದ ಕೆಳಗೆ ಬಿದ್ದು ಬಾಲಕನೋರ್ವ ಮೃತಪಟ್ಟ ಘಟನೆ ಎ.‌ ೧ರ ಮುಂಜಾನೆ ನಡೆದಿದೆ. ಬಂಟ್ವಾಳ ಜಕ್ರಿಬೆಟ್ಟು ನಿವಾಸಿ ದಿನೇಶ್ ಪೂಜಾರಿ ಅವರ ಪುತ್ರ ಆದಿಶ್(೧೫) ಮೃತಪಟ್ಟ ಬಾಲಕ. ಆತ ಮನೆಯಲ್ಲಿ ದೊಡ್ಡಮ್ಮನ...

ಮಾಂಸ ಪ್ರಿಯರಿಗೆ ಬೆಲೆ ಏರಿಕೆ ಶಾಕ್.. ಕೋಳಿ ಮಾಂಸದ ದರ ಏರಿಕೆ

ಮಂಗಳೂರು: ಕೋಳಿಮಾಂಸ, ಮೀನಿನ ದರ ಏರುಗತಿ ಯಲ್ಲಿ ಸಾಗುತ್ತಿದ್ದು ಮಾಂಸಾಹಾರ ಪ್ರಿಯರ ಜೇಬಿಗೂ ಕತ್ತರಿ ಬೀಳುವಂತಾಗಿದೆ. ಪ್ರಸ್ತುತ ಕೋಳಿಮಾಂಸಕ್ಕೆ (ವಿದ್‌ ಸ್ಕಿನ್‌) ಕೆ.ಜಿ.ಗೆ ಬ್ರಾಯ್ಲರ್‌ ಕೆಲವು ಕಡೆ 235-240 ರೂ., ಟೈಸನ್‌ 270 ರೂ....