ಹುಟ್ಟಿದಾಗಿನ
ಸಂಭ್ರಮ
ಸಾವಿನಲ್ಲೂ ಹುಟ್ಟಬೇಕಿತ್ತು..!
ಮಗ ಹುಟ್ಟಿದ ಖುಷಿಗೆ
ಊರೆಲ್ಲ ಲಡ್ಡು
ಹಂಚಿದ ಅಪ್ಪ…
ಅವ್ವನೂ ಅಷ್ಟೇ
ಎದ್ದು ಓಡಾಡಲಾಗದಿದ್ದರೂ
ಆಗಾಗ ಪುಟ್ಟ ಮಗುವ
ತಲೆ ಸವರುತ್ತಲೇ
ಊರೇನು ಲೋಕವೇ
ಸುತ್ತಿ ಬಂದಿರುತ್ತಾಳೆ…!
ಅವತ್ತು ಮನೆಗೆ ಸಿಂಗಾರ,
ಅಡುಗೆ ಮನೆಯಲ್ಲಿ ಸಡಗರ,
ಮನಸ್ಸಂತು ವಿಶಾಲ ಸಾಗರ..!
ಸತ್ತಾಗ ಇಷ್ಟೇ ಸಂಭ್ರಮ ಯಾಕಿಲ್ಲ..!?
ಬಿಗಿದ ಮುಖ
ನೀರು ಸುರಿಸುವ ಕಣ್ಣು
ಮಾತಾಡಲಾಗದ ನಾಲಿಗೆ
ಹೆಜ್ಜೆ ಇಡಲಾಗದ ಕಾಲು..
ಎಲ್ಲಾ ಭಾರ ಭಾರ..!
ಹುಟ್ಟಿದಾಗಲೇ
ಸಾವು ಬೆನ್ನಿಗೆ ಅಂಟಿಕೊಂಡದ್ದು
ತಿಳಿದಿದೆಯಲ್ಲವೇ..?
ಸಾವೆನ್ನುವುದು
ಜೀವನದ ಸುಖ-ದುಃಖಕ್ಕೆ
ಮುಕ್ತಿಯಲ್ಲವೇ..?
ಕ್ಷಣಿಕ ನಿದ್ದೆಯ ಬಿಟ್ಟು
ಚಿರ ನಿದ್ದೆಗೆ ಜಾರುವುದು
ಒಂದು ಯೋಗವಲ್ಲವೇ..
ಇವೆಲ್ಲವನ್ನೂ ತಿಳಿದು ತಿಳಿದು
ಸಂಭ್ರಮಿಸಲಾಗದೇ..!?
ಹುಟ್ಟು ಮತ್ತು ಸಾವನ್ನು
ಒಂದೇ ರೀತಿ ಸ್ವೀಕರಿಸುವುದು
ಯಾವಾಗ..?
ಯಾವುದರಿಂದ ಮುಕ್ತನಾದಾಗ..!?
✍ಯತೀಶ್ ಕಾಮಾಜೆ