ಎಲ್ಲಾ ಪ್ರಶ್ನೆಗೆ
ಉತ್ತರಿಸಬೇಕೆಂದಿಲ್ಲ
ಹಾಗೆಂದು ಪ್ರಶ್ನೆಗೆ ಉತ್ತರ
ಇರದಿಲ್ಲ..!
ಪ್ರಶ್ನೆ ಹುಟ್ಟಿದ್ದೇ ಉತ್ತರದಿಂದ…!
ಅವ್ವನ ಪ್ರಶ್ನೆಯು
ಅವಳ ಪ್ರಶ್ನೆಯು ಒಂದೇ
“ಏನಾದರೂ ತಿಂದೆಯ..?”
ಅವ್ವನಲ್ಲಿ ‘ಇಲ್ಲ’
ಅವಳಲ್ಲಿ ‘ತಿಂದೆ’
ಎರಡುತ್ತರ ಬಂದದ್ದು ಹಸಿವಿದ್ದಾಗಲೇ…!
ಪ್ರಶ್ನೆಯಿಂದಲೇ ಹಸಿವಾದದ್ದು
ಪ್ರಶ್ನೆಯಿಂದಲೇ ಹಸಿವು
ಮಾಯವಾದದ್ದು..!?
ವ್ಯತ್ಯಾಸ ಪ್ರಶ್ನೆಯಲ್ಲಲ್ಲ,
ಧ್ವನಿಯಲ್ಲಿರಬೇಕು..!
ಕೆಲವೊಂದು ಪ್ರಶ್ನೆಗಳೇ ಹಾಗೆ
ಉತ್ತರ ಮರೆತು ಬಿಡುತ್ತವೆ.,
ಕೆಲವೊಮ್ಮೆ ಉತ್ತರ ಮುಖಕ್ಕೆ ಪಟಾರನೆ
ಬಾರಿಸುತ್ತದೆ
ಮತ್ತೆ ಕೆಲವೊಮ್ಮೆ ಉತ್ತರ ನಗು ಹುಟ್ಟಿಸುತ್ತದೆ
ಉತ್ತರ ಅಸಹ್ಯ ಎನಿಸುವುದೂ ಉಂಟು..
ಪ್ರಶ್ನೆ ಒಂದೇ ಆಗಿರಬಹುದು
ಉತ್ತರ ಒಂದೇ ಆಗಿರಬೇಕಿಲ್ಲ…
ಎಲ್ಲಾ ಪ್ರಶ್ನೆಗೆ
ಉತ್ತರ ಹುಡುಕಬೇಡಿ..
ಕೆಲವೊಂದು ಪ್ರಶ್ನೆಗೆ
ಸರಿ ಉತ್ತರವೇ ಇರುವುದಿಲ್ಲ..!
ಯೋಚಿಸಿ ನೋಡಿ
ನಿಮ್ಮೆಲ್ಲಾ ಪ್ರಶ್ನೆಗಳಿಗೂ
ಉತ್ತರ ಸಿಕ್ಕಿದೆಯೇ..!
✍ಯತೀಶ್ ಕಾಮಾಜೆ