ಮರದಡಿ ಬಡಿಗನು ಕೆಲಸವ ಮಾಡುತ
ಸಾಗಿಸುತಿದ್ದನು ಜೀವನವ
ಕಿಟಕಿ ಬಾಗಿಲು ತೊಲೆ ಕಂಬಗಳ
ಮಾಡುತಲಿದ್ದನು ನವ-ನವ
ಮಂಗವು ತನ್ನಯ ಮರಿ ಜೊತೆ ಬಂದಿತು
ಆಡಲು ಬಿಟ್ಟಿತು ಮರಿಯನ್ನು
ಹಿರಿ ಹಿರಿ ಹಿಗ್ಗುತ ಮನದಲಿ ಮೆಚ್ಚಿತು
ಮರಿಯು ಮಾಡುವ ಪರಿಯನ್ನು
ಕಟ್ಟಿಗೆ ಕೊರೆದು ಬೆಣೆಯನು ಜಡಿದು
ಬಡಿಗನು ಹೋದನು ಊಟಕ್ಕೆ
ಮರವನು ಇಳಿದು ಮರಿಯು ಬಂದಿತು
ಬೆಣೆಯನು ಬಯಸಿತು ಆಟಕ್ಕೆ
ಕಿತ್ತರೆ ಬೆಣೆಯನು ಬಾಲವು ಹಿಚುಕಿ
ಒದ್ದಾಡುವುದು ಮರಿ ಕೋತಿ
ತಾಯಿಯ ಮಾತನು ಕೇಳದೆ ತಾನು
ತಿಳಿಯದೆ ಹೋಯಿತು ನಿಜ ನೀತಿ
ಕಟ್ಟಿಗೆ ನಡುವೆ ಬಾಲವ ಬಿಟ್ಟು
ಬೆಣೆಯನು ಕಿತ್ತಿತು ಬಲವಾಗಿ
ಬಾಲವು ಗಚ್ಚನೆ ಹಿಚುಕಿತು ಕೂಡಲೆ
ಮರಿಯು ಚೀರಿತು ಜೋರಾಗಿ
ಅತ್ತಿಂದಿತ್ತ ಹಾರಿತು ಜಿಗಿಯಿತು
ಬಾಲವೆ ಹೋಯಿತು ತುಂಡಾಗಿ
ತಾಯಿಯು ಬಂದಿತು ಕಂಬನಿ ಸುರಿಸಿತು
ಕಂದನ ನೋವಿಗೆ ತಾ ಕರಗಿ
ತುಂಡು ಬಾಲದಿ ಕಿರುಚುತ ಅರಚುತ
ಓಡಿತು ಮರಿಯು ವನದೊಳಗೆ
ತಾಯಿಯ ಮಾತನು ಕೇಳದ ತಪ್ಪಿಗೆ
ತನ್ನನೆ ಹಳಿಯಿತು ಮನದೊಳಗೆ
#ನೀ. ಶ್ರೀಶೈಲ ಹುಲ್ಲೂರು