ಕಡಬ : ಕಡಬದ ಕೈಕಂಬ ಎಂಬಲ್ಲಿ ಟಾಯ್ಲೆಟ್ ಒಳಗಡೆ ಬಂಧಿಯಾಗಿದ್ದ ಚಿರತೆ ಸೆರೆ ವೇಳೆ ಚಾಲಾಕಿ ಚಿರತೆ ಪರಾರಿಯಾಗಿದೆ.
ಕಡಬದ ಕೈಕಂಬ ಜಯಲಕ್ಷ್ಮಿ ಎಂಬವರ ಮನೆಯ ನಾಯಿಯನ್ನು ಹಿಡಿಯಲು ಬಂದ ಚಿರತೆ ಹೆದರಿ ಓಡಿದ ನಾಯಿ ಜೊತೆಗೆ ಟಾಯ್ಲೆಟ್ ಒಳಗಡೆ ನುಗ್ಗಿತ್ತು. ಚಿರತೆಯನ್ನು ಗಮನಿಸಿದ ಮನೆಯವರು ಬಾಗಿಲು ಹಾಕಿದ್ದು, ಚಿರತೆ ಮತ್ತು ನಾಯಿ ಟಾಯ್ಲೆಟ್ ಒಳಗಡೆ ಬಂಧಿಯಾಗಿತ್ತು. ಈ ಹಿನ್ನೆಲೆಯಲ್ಲಿ ಅಲ್ಲಿನ ಸ್ಥಳೀಯರು ಅರಣ್ಯಾಧಿಕಾರಿಗಳಿಗೆ ಸುದ್ದಿ ಮುಟ್ಟಿಸಿದರು. ತಕ್ಷಣ ಸ್ಥಳಕ್ಕೆ ಆಗಮಿಸಿದ ಸಿಬ್ಬಂದಿ ಅರಿವಳಿಕೆ ನೀಡಿ ಚಿರತೆಯನ್ನು ಹಿಡಿಯುವ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಚಿರತೆ ಎಸ್ಕೇಪ್ ಆಗಿದೆ.
ಸರಿಯಾದ ತರಬೇತಿ ಇಲ್ಲದೇ ಚಿರತೆ ಹಿಡಿಯಲು ಅರಣ್ಯ ಅಧಿಕಾರಿಗಳು ಹರಸಾಹಸ ಪಟ್ಟರು ಆದರೂ ಚಿರತೆ ಪರಾರಿಯಾಗಿದೆ. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಅರಣ್ಯಾಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಏರ್ ಗನ್ ಇದ್ದರೂ ಸರಿಯಾದ ರೀತಿಯಲ್ಲಿ ಆಪರೇಟ್ ಮಾಡಲೂ ಅರಣ್ಯ ಅಧಿಕಾರಿಗಳಿಗೆ ಸಾಧ್ಯವಾಗಿಲ್ಲ. ಸ್ಮೃತಿ ತಪ್ಪಿಸುವ ಔಷಧ ತುಂಬಿಸುವ ಬಗ್ಗೆ ಸ್ಥಳೀಯ ಪಶುಸಂಗೋಪನಾ ಅಧಿಕಾರಿಗಳಲ್ಲಿ ಸಹ ಗೊಂದಲ ಏರ್ಪಾಡಾಗಿತ್ತು. ಸರಿಯಾದ ವ್ಯವಸ್ಥೆ ಇಲ್ಲದೇ ಚಿರತೆ ರಕ್ಷಣಾ ಕಾರ್ಯಾಚರಣೆ ಮಾಡಲಾಗಿದ್ದು, ಚಿರತೆ ಸಿಗದೇ ತಪ್ಪಿಸಿಕೊಂಡು ಓಡಿ ಹೋಗಿದೆ. ಮುಂದಿನ ದಿನಗಳಲ್ಲಾದರೂ ಸರಿಯಾಗಿ ಅರಿವಳಿಕೆ ಔಷಧ ಗನ್ ಅಪರೇಟ್ ಮಾಡುವ ಅಧಿಕಾರಿಗಳನ್ನು ಈ ಪ್ರದೇಶದಲ್ಲಿ ನೇಮಕ ಮಾಡುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.