ಬಂಟ್ವಾಳ: ಗ್ರಾಮಪಂಚಾಯತ್ ವ್ಯಾಪ್ತಿಯ ಬೇಡಿಕೆಗೆ ಧ್ವನಿಯಾಗುವ ಮೂಲಕ ಪಂಚಾಯತ್ ಜನಸೇವೆಯಲ್ಲಿ ತೊಡಗಿಸಿಕೊಳ್ಳಿ , ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಿ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಹೇಳಿದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಅಬ್ದುಲ್ ನಜಿರ್ ಸಾಬ್ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆ, ಮೈಸೂರು, ದ.ಕ. ಮಂಗಳೂರು, ತಾಲೂಕು ಪಂಚಾಯತ್ ಬಂಟ್ವಾಳ ವತಿಯಿಂದ ನಡೆದ ನೂತನವಾಗಿ ಆಯ್ಕೆಯಾದ ಗ್ರಾಮ ಪಂಚಾಯತ್ ಚುನಾಯಿತ ಪ್ರತಿನಿಧಿಗಳ ಸಾಮರ್ಥ್ಯಾಭಿವೃದ್ದಿ ತರಬೇತಿಯನ್ನು ಗಿಡಕ್ಕೆ ನೀರು ಎರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯ ಅಡಿಗಲ್ಲು ಆಗಿರುವ ಪಂಚಾಯತ್ ವ್ಯವಸ್ಥೆಯ ಮೂಲಕ, ಸದಸ್ಯರು ಹೊಂದಾಣಿಕೆಯಿಂದ ಕಾರ್ಯನಿರ್ವಹಿಸಿದರೆ ಗ್ರಾಮಾಭಿವೃದ್ಧಿ ಸಾಧ್ಯ ಎಂದವರು ಅಭಿಪ್ರಾಯಿಸಿದರು.
ಅಭಿವೃದ್ಧಿ ಯ ವಿಷಯದಲ್ಲಿ ರಾಜಕೀಯ ಮಾಡುವುದು ಬೇಡ, ಗ್ರಾಮ ಪಂಚಾಯತ್ ಸದಸ್ಯರು ಹಕ್ಕು ಚಲಾಯಿಸುವುದರ ಜೊತೆ ಕರ್ತವ್ಯಗಳನ್ನು ನಿಷ್ಠೆ ಯಿಂದ ಮಾಡಿ ಎಂದರು.
ಗ್ರಾಮವನ್ನು ರಾಮ ರಾಜ್ಯ ಮಾಡುವ ದೊಡ್ಡ ಜವಬ್ದಾರಿ ಇರುವುದು ಗ್ರಾಮ ಪಂಚಾಯತ್ ಸದಸ್ಯರಲ್ಲಿ ಜೊತೆಗೆ ಬಡವರವಸೇವೆ ಮಾಡಲು ಸಿಕ್ಕಿದ ಅವಕಾಶ ಎಂದು ಅವರು ಹೇಳಿದರು.
ತಾ.ಪಂ.ಅಧ್ಯಕ್ಷ ಚಂದ್ರಹಾಸ ಕರ್ಕೇರ ಅಧ್ಯಕ್ಷತೆವಹಿಸಿ, ಮಾತನಾಡಿ ತಳಮಟ್ಟದ ಜನರ ಆಶೋತ್ತರಗಳಿಗೆ ಸ್ಪಂದಿಸುವ ಮೂಲಕ, ಪಂಚಾಯತ್ ರಾಜ್ ವ್ಯವಸ್ಥೆಯ ಆಶಯವನ್ನು ಬಲಿಷ್ಠಗೊಳಿಸಬೇಕಾಗಿದೆ, ಗ್ರಾಮದ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಅಭಿವೃದ್ಧಿ ಯ ಜೊತೆಯಾಗಿ ಎಂದು ತಿಳಿಸಿದರು.
ತಾ.ಪಂ. ಉಪಾಧ್ಯಕ್ಷ ಅಬ್ಬಾಸ್ ಅಲಿ ಬೋಳಂತೂರು, ಮಾತನಾಡಿ ಸಮಾಜದ ಕಟ್ಟಕಡೆಯ ವ್ಯಕ್ತಿಗಳಿಗೆ ನ್ಯಾ ಯ ಒದಗಿಸುವ ಕೆಲಸ ಗ್ರಾ.ಪಂ.ಸದಸ್ಯರಿಂದ ಆಗಬೇಕಾಗಿದೆ ಎಂದರು.
ಸ್ಥಾಯಿ ಸಮಿತಿ ಅಧ್ಯಕ್ಷೆ ಮಲ್ಲಿಕಾ ಶೆಟ್ಟಿ, ಮಾತನಾಡಿ ಒಗ್ಗಟ್ಟಿನಿಂದ ಕೆಲಸ ಮಾಡಿದಾಗ ಗ್ರಾಮದ ಅಭಿವೃದ್ಧಿ ಯಾಗುತ್ತದೆ ಎಂದು ಹೇಳಿದರು.
ಜಿ.ಪಂ. ಲೆಕ್ಕಾಧಿಕಾರಿ ಜೀವಲ್ ಖಾನ್, ತಾ.ಪಂ.ವ್ಯವಸ್ಥಾಪಕಿ ಶಾಂಭವಿ, ತರಬೇತುದಾರರಾದ ಮಂಜುವಿಟ್ಲ, ಮೌನೇಶ ವಿಶ್ವಕರ್ಮ, ಜಯಲಕ್ಷ್ಮೀ ತಾ.ಪಂ. ಸಿಬ್ಬಂದಿಗಳು ಉಪಸ್ಥಿತರಿದ್ದರು.
ಅನಂತನಾಡಿ, ಅಮ್ಮುಂಜೆ, ಬೋಳಂತೂರು, ಬಡಗಬೆಳ್ಳೂರು ಗ್ರಾ.ಪಂ. ಪ್ರತಿನಿಧಿಗಳು ತರಬೇತಿಯಲ್ಲಿ ಭಾಗವಹಿಸಿದರು. ತರಬೇತುದಾರ ಉಮಾನಾಥ ಶೆಟ್ಟಿ ಪ್ರಸ್ತಾವನೆ ಗೈದರು.
ತಾ.ಪಂ. ಸಹಾಯಕ ಲೆಕ್ಕಾಧಿಕಾರಿ ಪ್ರಶಾಂತ್ ಸ್ವಾಗತಿಸಿ, ತಾ.ಪಂ.ಸಹಾಯಕ ನಿರ್ದೇಶಕ ಶಿವಾನಂದ್ ವಂದಿಸಿದರು. ತರಬೇತುದಾರ ಫಾರೂಕ್ ಗೂಡಿನಬಳಿ ನಿರೂಪಿಸಿದರು.