ಬಂಟ್ವಾಳ: ತಮ್ಮ ಪರಂಪರೆಯನ್ನು ಉಳಿಸಿ ಕೊಂಡು ಸಮಾಜ ಸೇವೆಯ ಮನೋಭಾವ ದೊಂದಿಗೆ ದುಡಿಯುತ್ತಿರುವ ಸವಿತಾ ಸಮಾಜ ಶ್ಲಾಘನೆಗೆ ಅರ್ಹ ಅಲ್ಲದೇ ಸ್ವಾಭಿಮಾನಿ ರಾಷ್ಟ್ರ ನಿರ್ಮಾಣಕ್ಕೆ ಹೋರಾಡಿದ ಶಿವಾಜಿ ಮಹಾರಾಜರ ಶೌರ್ಯ, ಸಾಹಸ, ದೇಶಭಕ್ತಿ ನಮಗೆಲ್ಲರಿಗೂ ಆದರ್ಶ ಎಂದು ಕೇಂದ್ರ ಸ್ಥಾನಿಯ ಶಿರಸ್ತೇದಾರ್ ಅಣ್ಣು ನಾಯ್ಕ್ ಹೇಳಿದರು.
ಅವರು ಶುಕ್ರವಾರ ಬಿ.ಸಿ.ರೋಡಿನ ಮಿನಿ ವಿಧಾನಸೌಧ ಸಭಾಂಗಣದಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ವತಿಯಿಂದ ನಡೆದ ಶ್ರೀ ಸವಿತಾ ಮಹರ್ಷಿ ಹಾಗೂ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದರು.
ತಾಲೂಕು ಸವಿತಾ ಸಮಾಜದ ಅಧ್ಯಕ್ಷ ಸುರೇಶ್ ನಂದೊಟ್ಟು ಮಾತನಾಡಿ, ದೇವಾನು ದೇವತೆಗಳ ಆಯುಷ್ಕರ್ಮವನ್ನು ನೆರವೇರಿಸುತ್ತಿದ್ದ ಸವಿತಾ ಮಹರ್ಷಿಗಳ ಜನ್ಮ ದಿನವನ್ನು ನಾವು ಸವಿತಾ ಜಯಂತಿಯಾಗಿ ಆಚರಿಸುತ್ತಿದ್ದೇವೆ. ಆಯುಷ್ಕರ್ಮ ಮಾತ್ರವಲ್ಲ ಆಯುರ್ವೇದವನ್ನು ಒಳಗೊಂಡು ಸಮಾಜದ ಒಳಿತಿಗಾಗಿ ಈ ಸಮಾಜ ಶ್ರಮಿಸುತ್ತಿದೆ ಎಂದರು.
ಈ ಸಂದರ್ಭದಲ್ಲಿ ಉದ್ಯಮಿ, ಬಿ.ಸಿ.ರೋಡು ಸವಿತಾ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ವಿಶ್ವನಾಥ್ ಬಂಟ್ವಾಳ, ಉಪತಹಸೀಲ್ದಾರ್
ರಾಜೇಶ್ ನಾಯ್ಕ್ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ವಿಶುಕುಮಾರ್, ತಾಲೂಕು ಕಚೇರಿ ಸಿಬ್ಬಂದಿಗಳು ಗ್ರಾಮ ಲೆಕ್ಕಾಧಿಕಾರಿಗಳು ಗ್ರಾಮ ಸಹಾಯಕರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು. ಜನಾರ್ದನ ಬಂಟ್ವಾಳ್ ಸ್ವಾಗತಿಸಿ ವಂದಿಸಿದರು.